ಮುದ್ದೇಬಿಹಾಳ: ಪಟ್ಟಣದಲ್ಲಿ ಒಂದೇ ದಿನ 4 ಕೊರೊನಾ ಪಾಸಿಟಿವ್ ಕೇಸ್ಗಳು ಕಾಣಿಸಿಕೊಂಡಿರುವ ಹಿನ್ನೆಲೆ ಇಲ್ಲಿನ ಬಾಂಡ್ ರೈಟರ್ಸ್ ಅಂಗಡಿ ಮಾಲೀಕರು ಸ್ವಯಂಘೋಷಿತ ಲಾಕ್‌ಡೌನ್ ಮಾಡಿಕೊಂಡಿದ್ದಾರೆ.
ಪಟ್ಟಣದ ಗಣೇಶ ನಗರದಲ್ಲಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಬಾಂಡ್ ರೈಟರ್ಸ್ ಅಂಗಡಿ ಮಾಲೀಕರು ತಮ್ಮ ವ್ಯಾಪಾರವನ್ನು ಜುಲೈ 7ರಿಂದ 12ರವರೆಗೆ ಸ್ವಯಂಪ್ರೇರಿತರಾಗಿ ಸ್ಥಗಿತಗೊಳಿಸಲಿದ್ದಾರೆ. ಈ ಸಮಯದಲ್ಲಿ ಯಾವುದೇ ಆಸ್ತಿ ಖರೀದಿ ಪತ್ರಗಳ ಬರಹ, ನೋಂದಾವಣೆ ಮಾಡುವುದಿಲ್ಲ ಎಂದು ಪ್ರತಿಯೊಂದು ಅಂಗಡಿಯ ಎದುರಿಗೆ ಭಿತ್ತಿ ಪತ್ರ ಅಂಟಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜಿಲ್ಲಾ ದಸ್ತು ಬರಹಗಾರ ಡಿ.ಹೆಚ್.ತೊಗರಿ, ಕೊರೊನಾ ವೈರಸ್ ನಿಯಂತ್ರಣಕ್ಕೆ ನಾವು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ನಂತರ ಮಾತನಾಡಿದ ಮುಖಂಡ ಅಶೋಕ ನಾಡಗೌಡ, ಬಾಂಡ್ ರೈಟರ್ಸ್ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮುನ್ನ ಒಮ್ಮೆ ಯೋಚಿಸಬೇಕಿತ್ತು. ಐದು ದಿನಗಳ ಕಾಲ ಬಂದ್ ಮಾಡುವುದರಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತದೆ ಎಂದು ಭಾವಿಸುವುದು ಸರಿಯಲ್ಲ. ಅಂಗಡಿ ಬಾಗಿಲನ್ನು ಒಮ್ಮೆಲೇ ತೆರೆದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಜನರನ್ನು ನಿಯಂತ್ರಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.