ವಿಜಯಪುರ: ಕೊರೊನಾ ಭೀತಿಯ ನಡುವೆ ಉದ್ಯೋಗವಿಲ್ಲದಿದ್ದರೂ ತಮ್ಮ ಆತ್ಮೀಯ ಗೆಳೆಯನ ಮದುವೆಗಾಗಿ ವಿಜಯಪುರ ನಗರದಲ್ಲಿ ವಿಶೇಷ ಚೇತರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ತಮ್ಮ ಸ್ನೇಹ ಸ್ವಚ್ಛವಾದದ್ದು ಎಂದು ನಿರೂಪಿಸಿದ್ದಾರೆ. ಅಲ್ಲದೆ, ಕಣ್ಣಿದ್ದವರು ಕೂಡ ಈ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ನಗರದ ಭವಾನಿ ಬ್ಲೈಂಡ್ ಫೌಂಡೇಶನ್‌ನಲ್ಲಿರುವ ಹುಟ್ಟಿನಿಂದಲೇ ಜಗತ್ತನೇ ನೋಡದಿರುವ ನಟರಾಜ ಹಾಗೂ ಗಾಯತ್ರಿ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ, ತಮ್ಮ ಪ್ರೇಮದ ಕುರಿತು ಸಂಸ್ಥೆಯ ತಮ್ಮ ಗೆಳೆಯರಿಗೆ ಹೇಳಿಕೊಂಡಿದ್ದರು. ಆದರೆ, ಸಂಗೀತವನ್ನೇ ನಂಬಿಕೊಂಡು ಬದಕು ಕಟ್ಟಿಕೊಂಡಿದ್ದ ಈ ವಿಶೇಷ ಚೇತನರ ಎಲ್ಲಾ ಕಾರ್ಯಕ್ರಮಗಳಿಗೆ ಕೊರೊನಾ ಅಡ್ಡಿಪಡಿಸಿತು.
ಆದರೆ, ಎಷ್ಟೇ ಕಷ್ಟವಾದರೂ ನಟರಾಜ ಹಾಗೂ ಗಾಯತ್ರಿ ಮದುವೆ ಮಾಡಲೇಬೇಕು ಎಂದು ನಿರ್ಧರಿಸಿದ್ದ ಅಂಧ ಕಲಾವಿದರು, ಸಾರ್ವಜನಿಕ ಕಚೇರಿ, ದಾರಿ ಹೋಕರು ಸೇರಿ ಮನೆ, ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಹಿಂದೂ ಸಂಪ್ರದಾಯ ಪ್ರಕಾರ ಶಾಸ್ತ್ರೋಕ್ತವಾಗಿ ಇಂದು ಮಧ್ಯಾಹ್ನ ಅಭಿಜಿತ್ ಲಗ್ನದಲ್ಲಿ ಸರಳವಾಗಿ ವಿವಾಹ ನೆರವೇರಿಸಿದರು.
ಗಾಯತ್ರಿ ಹಾಗೂ ನಟರಾಜ ಅವರು ನಾಲ್ಕು ತಿಂಗಳ ಹಿಂದೆ ಬ್ಲೈಂಡ್ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರು. ಇತರೆ ಗೆಳೆಯರನ್ನೇ ನಾಚಿಸುವಂತೆ ಮಾಡಿರುವ ಇಲ್ಲಿನ ಸ್ನೇಹಿತರ ಕಾರ್ಯಕ್ಕೆ ನವದಂಪತಿ ಬಹಳ ಸಂತಸಗೊಂಡಿದ್ದಾರೆ. ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಅವರ ಸ್ನೇಹ ಹೀಗೆ ನೂರು ವರ್ಷಗಳ ಕಾಲ ಇರಲಿ ಎಂದು ಹಾರೈಸುತ್ತಿದ್ದಾರೆ.