ವಿಜಯಪುರ : ಗ್ರಾಮ ಪಂಚಾಯತ್ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದ್ದರೂ ಇನ್ನೂ ರಾಜಕೀಯ ಹಗೆತನ ಮಾತ್ರ ನಿಂತಿಲ್ಲ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಸಲಿಂಗಪ್ಪ ಜೆಟ್ಟಪ್ಪ ಮಕಾಳಿ (ಸಾಹುಕಾರ್) ವಿರುದ್ಧ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ.
ಗೊಂಬೆಗೆ ಬಸಲಿಂಗಪ್ಪ ಅವರ ಭಾವಚಿತ್ರ ಹಚ್ಚಿ, ಆ ಗೊಂಬೆಗೆ ಮೊಳೆ ಹೊಡೆಯಲಾಗಿದೆ. ಬಳಿಕ ಮಣ್ಣಿನ ಗೊಂಬೆಯನ್ನು ಊರ ಹೊರಗಿನ ಹೊಲದಲ್ಲಿ ಮೃತ ವ್ಯಕ್ತಿಯೊಬ್ಬನ ಸಮಾಧಿಯ ಬಳಿ ಇಡಲಾಗಿದೆ.
ಗ್ರಾಪಂ ಚುನಾವಣೆಯಲ್ಲಿ ಬಸಲಿಂಗಪ್ಪ ಮಕಾಳಿ ಸೋತಿದ್ದರು. ಸೋತ ಅಭ್ಯರ್ಥಿ ಬಸಲಿಂಗಪ್ಪ ಗ್ರಾಪಂ ಚುನಾವಣಾ ನಾಮಪತ್ರ ಸಲ್ಲಿಸುವ ಮುನ್ನ ಗ್ರಾಮದಲ್ಲಿ ನಾಗಸಾಧುಗಳು ಬಂದಿದ್ದರು. ಬಹುಶಃ ಅವರೇ ಈ ಕಾರ್ಯ ಮಾಡಿರಬಹುದು ಅಥವಾ ಬೇರೆಯವರಿಂದ ಮಾಟಮಂತ್ರ ಮಾಡಿಸಿರಹುದು ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ, ಇಂತಹ ಕೃತ್ಯ ಮಾಡಬಾರದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬಸಲಿಂಗಪ್ಪ ಮಕಾಳಿ ಈ ಚುನಾವಣೆಯಲ್ಲಿ 395 ಮತ ಪಡೆದು ಸೋತಿದ್ದರು. ಇದೀಗ ಗ್ರಾಮದಲ್ಲಿ ವಾಮಾಚಾರ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಮದುವೆ ಮನೆಯಲ್ಲಿ ಮೇಳದ ಬದಲು ಗುಂಡಿನ ಮೊರೆತ: ಬೆಚ್ಚಿ ಬಿದ್ದ ವಧು ಕುಟುಂಬ