ವಿಜಯಪುರ : ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸೋಂ, ಪುದುಚೇರಿ ಹಾಗೂ ಪಶ್ಚಿಮ ಬಂಗಾಳದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಲಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಹೊಂದಾಣಿಕೆ ಹಾಗೂ ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದರು.
ಭಾರತ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿ ಬೆಳೆದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ದೇಶದ ಜನತೆ ಮೋದಿ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಮುಂದಿನ ಪಂಚ ರಾಜ್ಯ ಚುನಾವಣೆಯಲ್ಲಿ ಗೆಲುವಿನ ಮೆಟ್ಟಿಲಾಗಲಿದೆ ಎಂದರು.
ಪೆಟ್ರೋಲ್ ಬೆಲೆ ಏರಿಕೆ ತಾತ್ಕಾಲಿಕ : ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಇದೊಂದೇ ಅಸ್ತ್ರ ವಿರೋಧ ಪಕ್ಷದವರ ಬಳಿ ಇದೆ. ಆದ್ದರಿಂದ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿವೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಲ್ಲಿ ಶೇ.32ರಷ್ಟು ಕರ ವಸೂಲಿಯಾಗುತ್ತದೆ. ಅದರಲ್ಲಿ ಶೇ.16ರಷ್ಟು ತೆರಿಗೆ ಹಣ ವಾಪಸ್ ರಾಜ್ಯಗಳ ಅಭಿವೃದ್ಧಿಗೆ ನೀಡಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಓದಿ: ರಾಹುಲ್ ಗಾಂಧಿ ಆ್ಯಕ್ಟರ್ ಅಂಡ್ ಟ್ರ್ಯಾಕ್ಟರ್ ಆಗಿದ್ದಾರೆ: ಜೋಶಿ ವಾಗ್ದಾಳಿ