ವಿಜಯಪುರ: ಹುಲಿ ಉಗುರಿನಂತಿರುವ ಪೆಂಡೆಂಟ್ ಧರಿಸಿದ ತಮ್ಮ ಪುತ್ರ ಶಾಶ್ವತ್ ಪಾಟೀಲರ ಫೋಟೋ ತೀರಾ ಹಳೆಯದ್ದು. ಕಿಡಿಗೇಡಿಗಳು ಈಗ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ನಿಗಮ ಮಂಡಳಿ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ ತಮ್ಮ ಮಗನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಈ ಫೋಟೋ ಏಳೆಂಟು ವರ್ಷಗಳಷ್ಟು ಹಿಂದಿನದ್ದು. 2016-17ರಲ್ಲಿ ತೆಗೆದ ಫೋಟೋ. ಇದಕ್ಕೂ ಮೇಲಾಗಿ ವಾಸ್ತು ಪ್ರಕಾರ ಹಾಕಿಕೊಳ್ಳಲಾಗಿದ್ದ ನಕಲಿ ಹುಲಿ ಉಗುರಿನ ಪೆಂಡೆಂಟ್ ಆಗಿದೆ. ಅಸಲಿ ಉಗುರಿನ ಪೆಂಡೆಂಟ್ ಅಲ್ಲ. ಅಲ್ಲದೇ ಆ ಸರವನ್ನು ಆವಾಗಲೇ ತೆಗೆಯಲಾಗಿದೆ. ಈ ಫೋಟೋಗಳ ವೈರಲ್ ಕುರಿತಾಗಿ ಮತ್ತು ಹುಲಿ ಉಗುರಿನ ಪೆಂಡೆಂಟ್ ಸತ್ಯಾಸತ್ಯತೆ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸಲಿ ಎಂದರು.
ಇಂತಹ ಫೋಟೋವನ್ನು ಫೇಸ್ಬುಕ್ ಮತ್ತು ಮಾಧ್ಯಮದಲ್ಲಿ ಹರಿಬಿಟ್ಟು ಯಾರೋ ಕಿಡಿಗೇಡಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದು ತಮ್ಮ ಕುಟುಂಬದ ವಿರುದ್ಧ ರಾಜಕೀಯ ವಿರೋಧಿಗಳು ಮಾಡುತ್ತಿರುವ ಷಡ್ಯಂತ್ರ. ಈ ಮೊದಲೂ ಕೂಡಾ ನನ್ನ ಸಣ್ಣ ಮಗನ ಮೇಲೆ ಇಂತಹ ಕೆಲಸವಾಗಿತ್ತು. ಇದೀಗ ದೊಡ್ಡ ಮನಗ ಮೇಲೆ ಆಗುತ್ತಿದೆ. ಪ್ರಬುದ್ಧ ರಾಜಕಾರಣಿಗಳಾದವರು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದು. ಚಿಲ್ಲರೆ ರಾಜಕಾರಣದಿಂದ ಹೊರಬಬೇಕು ಎಂದು ವಿಜುಗೌಡ ಪಾಟೀಲ್ ತಮ್ಮ ವಿರೋಧಿಗಳ ವಿರುದ್ಧ ಕಿಡಿಕಾರಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ತಮ್ಮ ರಾಜಕೀಯ ಎದುರಾಳಿ ಎಂ.ಬಿ.ಪಾಟೀಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಮಾತೆತ್ತಿದ್ರೆ ಲಕ್ಷ ಲಕ್ಷ ಹೆಕ್ಟೇರ್ ನೀರಾವರಿ ಮಾಡುವೆ ಅಂತಾರೆ. ಆದರೆ, ರೈತರಿಗೆ ನೀರಿಲ್ಲ, ಕರೆಂಟ್ ಇಲ್ಲ. ಮೊದಲು ಅದನ್ನು ಕೊಡಲಿ ಎಂದು ಗರಂ ಆದರು.
ತಿಕೋಟಾ ತಾಲೂಕಿನಲ್ಲಿ ಬರಗಾಲ ಉಂಟಾಗಿದೆ. ಭಾರಿ ಹಾನಿಯಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಸರ್ಕಾರ ಇದೆ. ಅವರು ಬರಗಾಲ ಎಂದು ಘೋಷಣೆ ಮಾಡಬೇಕು. ಆದರೆ, ಇವರು ಅಷ್ಟು ಪ್ರಬುದ್ಧ ರಾಜಕಾರಣಿ ಅಲ್ಲ. ಮಾಡುವುದೆಲ್ಲ ಚಿಲ್ಲರೆ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಬರಗಾಲ ಘೋಷಣೆ ಮಾಡಿದ್ರೆ ರೈತರಿಗೆ ಪರಿಹಾರ ಸಿಗುತ್ತೆ. ಐದು ಗ್ಯಾರೆಂಟಿ ಕೊಟ್ಟು ಸರ್ಕಾರವನ್ನು ಹಾಳು ಮಾಡಿದ್ದಾರೆ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಸುಳ್ಳು ಹೇಳಿಕೆ ಕೊಟ್ಟು ಜನ್ರಿಗೆ ಮೋಸ ಮಾಡಿ ಆರಿಸಿ ಬಂದಿದ್ದಾರೆ. ಇಂತವರನ್ನು ಭಗವಂತ ನೋಡ್ತಿರ್ತಾನೆ ಎಂದರು.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪ: ದರ್ಶನ್, ರಾಕ್ಲೈನ್ ವೆಂಕಟೇಶ್ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ