ವಿಜಯಪುರ: ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂದಗಿಯ ಸಾರಂಗಮಠದ ಮಠಾಧೀಶರು ಪ್ರಭುಸಾರಂಗದೇವ ಶಿವಾಚಾರ್ಯ ಅವರು, ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಈ ಬಾರಿ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುವ ಪ್ರಶಸ್ತಿ ಇದಾಗಿದ್ದು, ರೂ.1 ಲಕ್ಷ ನಗದು, ಬೆಳ್ಳಿ ಪದಕ ಒಳಗೊಂಡಿರುವ ಪ್ರಶಸ್ತಿ ಆಗಿದೆ ಎಂದರು.
ಸೆ. 25 ರಂದು ಸಿಂದಗಿ ಶಾಂತಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಶ್ರೀಶೈಲ ಜಗದ್ಗುರುಗಳ ಸಮ್ಮುಖದಲ್ಲಿ ವಿಜ್ಞಾನಿ ಕಸ್ತೂರಿರಂಗನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ವಿದ್ಯಾರ್ಥಿಗಳೊಂದಿಗೆ ಕಸ್ತೂರಿ ರಂಗನ್ ಸಂವಾದ ನಡೆಸಲಿದ್ದಾರೆ ಎಂದರು.
ಕಳೆದ ವರ್ಷ ಈ ಪ್ರಶಸ್ತಿಯನ್ನು ಭಾರತರತ್ನ ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್ ಅವರಿಗೆ ನೀಡಿ ಗೌರವಿಸಲಾಗಿತ್ತು. ಅಂದು ಅವರನ್ನು ಸಿಂದಗಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಗುತ್ತಿತ್ತು. ಆದರೆ ಕಸ್ತೂರಿರಂಗನ್ ಮೆರವಣಿಗೆ ಬದಲಿಗೆ ಪ್ರತಿಭಾವಂತ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವ ಬಯಕೆ ವ್ಯಕ್ತಪಡಿಸಿದ್ದು, ಅವರ ಇಚ್ಛೆಯಂತೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇರುವ ಜಿಲ್ಲೆಯ 100 ವಿದ್ಯಾರ್ಥಿಗಳಿಗೆ ಸಂವಾದದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಭಾಗಿಯಾಗಿದ್ದರು.