ವಿಜಯಪುರ: ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ತನಗೆ ಚಂದಪ್ಪನ ಸಬಂಧಿಗಳು ಬಿಡುತ್ತಿಲ್ಲ ಎಂದು ಭೀಮಾ ತೀರದ ಹಂತಕನಂತಲೇ ಗುರುತಿಸಿಕೊಂಡಿರುವ ಬಾಗಪ್ಪ ಹರಿಜನ ಹೇಳಿಕೊಂಡಿದ್ದಾನೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಗಪ್ಪ ಹರಿಹನ, ಸಹೋದರ ಬಸವರಾಜನ ಕೊಲೆ ಸಮಯದಲ್ಲಿ ನಾನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿದ್ದೆ. ಮಾಧ್ಯಮಗಳಲ್ಲಿ ವರದಿ ಬಂದಿದ್ದು ನೋಡಿದ ಮೇಲೆ ನನಗೆ ವಿಷಯ ತಿಳಿಯಿತು. ಜೊತೆಗೆ ಪತ್ರಿಕೆಗಳಲ್ಲಿ ನನ್ನ ಹೆಸರು ಕೂಡ ಬಂತು. ಈ ವಿಚಾರವನ್ನು ಅಂದೇ ಸಿಪಿಐ ಅವರಿಗೆ ಕರೆ ಮಾಡಿ ಕೂಡಾ ಹೇಳಿದ್ದೆ.
ಆದರೆ ಅವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೂ ಆ ಕೇಸ್ನಲ್ಲಿ ನನ್ನ ಹೆಸರು ಸೇರಿಸಲಾಯಿತು. ನಂತರ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ನಾನು ನಮ್ಮ ಅಕ್ಕನ ಪರ ಚುನಾವಣಾ ಪ್ರಚಾರಕ್ಕೆ ಬಂದಾಗ ದೇವಣಗಾಂವ್ ಗ್ರಾಮದಲ್ಲಿ ನನ್ನನ್ನು ಬಂಧಿಸಿದ್ದರು. ಸುರೇಶ್ ಲಾಳಸಂಗಿ ಹಾಗೂ ಉಮರಾಣಿಯ ಪುತ್ರಪ್ಪ ಸಾಹುಕಾರ್ ಅವರ ಕೇಸುಗಳನ್ನು ಸಹ ನನ್ನ ಮೇಲೆ ಹಾಕಲಾಯಿತು. ಆ ಕೇಸುಗಳ ವಿಚಾರಣೆಗೆ ಕೋರ್ಟ್ಗೆ ಬಂದಾಗ ನನ್ನ ಮೇಲೆ ಫೈರಿಂಗ್ ಮಾಡಿದರು.
ಚಂದಪ್ಪನ ಸಂಬಂಧಿ ಭೀಮರಾಯ ಎಂಬಾತ ಮೊದಲಿನಿಂದಲೂ ನನಗೆ ತೊಂದರೆ ಕೊಡುತ್ತಲೇ ಬಂದಿದ್ದಾನೆ. ಅದೇ ವಿಚಾರವಾಗಿ ಕಳೆದ ಬಾರಿ ಮಾಧ್ಯಮದವರ ಮುಂದೆ ನನ್ನ ತಂಟೆಗೆ ಬಂದ್ರೆ ನಾನು ಮತ್ತೆ ಗನ್ ಹಿಡಿಯಬೇಕಾಗುತ್ತದೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.