ವಿಜಯಪುರ: ಜಿಲ್ಲೆಯ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಭಾನುವಾರ ಆರಂಭವಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಜಾಗೃತ ದೇವರೆಂದೇ ಖ್ಯಾತಿಯಾಗಿರುವ ಶ್ರೀ ಯಲಗೂರು ಆಂಜನೇಯ ದೇವಸ್ಥಾನದಲ್ಲಿ ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ಅವರ ನೇತೃತ್ವದಲ್ಲಿ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕೆ ಮಾಡುತ್ತಿದ್ದಾರೆ.
ನೇಪಾಳದ ಕರೆನ್ಸಿ ನೋಟು, ಬೇಡಿಕೆ ಪತ್ರ ಪತ್ತೆ: ಹುಂಡಿಯಲ್ಲಿ ನೇಪಾಳ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಜತೆಗೆ ದೇವರಿಗೆ ಬರೆದ ವಿವಿಧ ಬೇಡಿಕೆಗಳ ಈಡೇರಿಕೆ ಪತ್ರಗಳು ಕೂಡ ಪತ್ತೆಯಾಗಿವೆ. ಪಿಎಸ್ಐ, ಎಸ್ಡಿಎ ಸೇರಿದಂತೆ ಇತರೆ ಸರ್ಕಾರಿ ನೌಕರಿಗಾಗಿಯೂ ದೇವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಮತ್ತೊಬ್ಬರು 'ಸಾಲ ಮಾಡಿದ್ದೇನೆ.. ಪರಿಹಾರ ತೋರಿಸು' ಎಂದು ಮರಾಠಿ ಭಾಷೆಯಲ್ಲಿ ಬರೆದ ಪತ್ರ ಕೂಡ ಸಿಕ್ಕಿದೆ. ಹುಂಡಿ ಎಣಿಕೆ ಕಾರ್ಯ ಮುಂದುವರೆದಿದ್ದು, ಈವರೆಗೆ ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ನಂತರ ಲಭ್ಯವಾಗಲಿದೆ ಎಂದು ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ಮಾಹಿತಿ ನೀಡಿದ್ದಾರೆ.
ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ: ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೇವಲ 36 ದಿನಗಳಲ್ಲಿ ಎರಡು ಕೋಟಿಗೂ ಅಧಿಕ ರೂ. ಸಂಗ್ರಹವಾಗಿತ್ತು. ಶಕ್ತಿ ಯೋಜನೆ, ಮಣ್ಣೆತ್ತಿನ ಅಮಾವಾಸ್ಯೆ ಪರಿಣಾಮ ಕೇವಲ 36 ದಿನಗಳಲ್ಲಿ 2,47,15,655 ರೂಪಾಯಿ ಸಂಗ್ರಹವಾಗಿತ್ತು. ನಿಷೇಧಕ್ಕೊಳಗಾಗಿ ವಿನಿಮಯಕ್ಕೆ ಅವಕಾಶವಿರುವ 2 ಸಾವಿರ ರೂ. ಮುಖಬೆಲೆಯ 37 ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದು, 77 ಗ್ರಾಂ ಚಿನ್ನ, 2.250 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದಾ ಮೇಲ್ವಿಚಾರಣೆಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು. ಸಿಸಿಟಿವಿ ಕ್ಯಾಮರಾದ ಕಣ್ಗಾವಲು ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ನಡೆದಿತ್ತು.
ಇದನ್ನೂ ಓದಿ: ಭಕ್ತರಿಗೆ ಶಕ್ತಿ: 36 ದಿನಕ್ಕೆ ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ
ರೇಣುಕಾಂಬ ದೇಗುಲದ ಸೀರೆ, ರವಿಕೆ ವಸ್ತ್ರಗಳು ಹರಾಜು: ರಾಜ್ಯದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಸಾರ್ವಜನಿಕ ಬಹಿರಂಗ ಹರಾಜು ನಡೆಸಲಾಗಿತ್ತು. ಎರಡು ವರ್ಷಗಳಿಂದ ಸಂಗ್ರಹವಾಗಿದ್ದ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಹರಾಜು ಮಾಡಲಾಗಿತ್ತು. ಹರಾಜಿನಿಂದ ಒಟ್ಟು 4.90 ಲಕ್ಷ ರೂ. ಆದಾಯ ಬಂದಿತ್ತು.
ಇದನ್ನೂ ಓದಿ: ಚಂದ್ರಗುತ್ತಿ ಶ್ರೀ ರೇಣುಕಾಂಬ ದೇಗುಲದ ಸೀರೆ, ರವಿಕೆ ವಸ್ತ್ರಗಳು ಹರಾಜು: 4.90 ಲಕ್ಷ ರೂ. ಸಂಗ್ರಹ