ವಿಜಯಪುರ: ಚಿನ್ನದ ವ್ಯಾಪಾರಿಯಿಂದ 5 ಕೋಟಿ ರೂ. ಬೇಡಿಕೆಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಎರಡನೇ ಆರೋಪಿ ಭೀಮಾ ತೀರದ ಹಂತಕ ಬಾಗಪ್ಪ ಹರಿಜನನ್ನು14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಗಪ್ಪ ಹರಿಜನನ್ನು ತಡರಾತ್ರಿ ಚಡಚಣ ಪೊಲೀಸರು ಬಂಧಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದರ ಜೊತೆಗೆ ಕೋವಿಡ್ ಪರೀಕ್ಷೆ ಕೂಡ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ನಂತರ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಇವರಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾನೆ.
ಪ್ರಕರಣದ ಹಿನ್ನೆಲೆ:
ಲಕ್ಷ್ಮಿಕಾಂತ ಪಾಟೀಲ, ಬಾಗಪ್ಪ ಹರಿಜನ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ಎಂಬುವವರು ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಬೆದರಿಸಿ 5 ಕೋಟಿ ರೂ. ಹಣ ಇಲ್ಲವೇ 3 ಕೆ.ಜಿ. ಚಿನ್ನಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಈ ಮೂವರ ವಿರುದ್ದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೊದಲು ಮಹಾದೇವ ಭೈರಗೊಂಡನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎರಡನೇ ಆರೋಪಿ ಬಾಗಪ್ಪ ಹರಿಜನ ಹಾಗೂ ಇನ್ನೊಬ್ಬ ಆರೋಪಿ ಲಕ್ಷ್ಮೀಕಾಂತ ಪಾಟೀಲ ತಲೆಮರೆಸಿಕೊಂಡಿದ್ದು, ತಡರಾತ್ರಿ ಬಾಗಪ್ಪ ಹರಿಜನನ್ನು ಚಡಚಣ ಪೊಲೀಸರು ಬಂಧಿಸಿದ್ದರು.