ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳವಾರದಿಂದ ಯಾರೂ ಕೂಡ ವಿದೇಶದಿಂದ ವಾಪಸ್ ಬಂದಿಲ್ಲವೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 1ರಿಂದ ಇಲ್ಲಿವರೆಗೂ 249 ಜನ ವಾಪಸಾಗಿದ್ದಾರೆ. ವೈರಸ್ ಶಂಕಿತ 10 ಜನ 28 ದಿನಗಳ ಕಾಲ ಮನೆಯಲ್ಲಿದ್ರು. 19 ಜನರನ್ನು 14 ದಿನಗಳ ಕಾಲ ಅವರವರ ಮನೆಯಲ್ಲಿರಿಸಲಾಗಿತ್ತು. ಒಟ್ಟು 85 ಜನರು ಹೋಮ್ ಕೋರ್ನಟೈನ್ನಿಂದ ಹೊರ ಬಂದಿದ್ದಾರೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಹೋಮ್ ಕೋರ್ನಟೈನ್‌ದಲ್ಲಿ 149 ಜನ ಇದ್ದಾರೆ. ಇಂದು ಯಾವುದೇ ಕೋವಿಡ್ 19 ವೈರಸ್ ಶಂಕಿತ ವ್ಯಕ್ತಿಗಳು ಕಂಡುಬಂದಿಲ್ಲ. ರೈಲು ನಿಲ್ದಾಣದಲ್ಲಿ ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಿ ಮಹಾರಾಷ್ಟ್ರದಿಂದ ಬರುವ ವೈರಸ್ ಶಂಕಿತ ವ್ಯಕ್ತಿಗಳ ಮೇಲೆ ನಿಗಾ ವಹಿಸಲು 6 ತಂಡಗಳನ್ನು ರಚಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಕಲಬುರಗಿ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಕಂಡು ಬಂದಿರುವ ಹಿನ್ನೆಲೆ ಜಿಲ್ಲೆಯಿಂದ ಹೋಗುವ ಬಸ್‌ಗಳ ಪ್ರಮಾಣ ಕೂಡ ಕಡಿಮೆ ಮಾಡಲಾಗಿದೆ. ಒಟ್ಟು 56 ಬಸ್‌ಗಳ ಪ್ರಯಾಣಕ್ಕೆ ಕೊಕ್ಕೆ ಹಾಕಲಾಗಿದೆ. ಅಗತ್ಯವೆನಿಸಿದ್ರೆ ಇನ್ನೂ ಕಡಿಮೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ರು.