ಬೆಂಗಳೂರು/ವಿಜಯಪುರ : ಕರ್ನಾಟಕ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ರಾಜಭವನದಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಲೋಕಾಯುಕ್ತರಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಕನ್ನಡ ಭಾಷೆಯಲ್ಲೇ, ಭಗವಂತ ಮತ್ತು ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಎಲ್ಲರ ಗಮನ ಸೆಳೆಯಿತು.
ಲೋಕಾಯುಕ್ತರಾಗಿ ನ್ಯಾ.ಬಿಎಸ್ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದೊಡನೆಯೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಲೋಕಾಯುಕ್ತರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿ, ಶುಭ ಹಾರೈಸಿದರು.
![ಬಿ.ಎಸ್ ಪಾಟೀಲ್](https://etvbharatimages.akamaized.net/etvbharat/prod-images/kn-vjp-02-lokayukta-appointment-av-ka10055_15062022111342_1506f_1655271822_832.jpg)
ಲೋಕಾಯುಕ್ತರಾಗಿ ನೇಮಕವಾಗುವ ಮುನ್ನ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಹಾಗೂ ನಂತರ ಕರ್ನಾಟಕ ಲೋಕಾಯುಕ್ತದಲ್ಲಿ ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
![ಬಿ.ಎಸ್ ಪಾಟೀಲ್](https://etvbharatimages.akamaized.net/etvbharat/prod-images/kn-vjp-02-lokayukta-appointment-av-ka10055_15062022111342_1506f_1655271822_731.jpg)
ತವರೂರು ವಿಜಯಪುರದಲ್ಲಿ ಸಂಭ್ರಮ : ಬಿ.ಎಸ್ ಪಾಟೀಲ್ ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಪಡೇಕನೂರು ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮಾಡಿದ್ದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾ ವಿಭಾಗ, ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪೂರೈಸಿದ್ದಾರೆ. ಎಲ್‌ಎಲ್‌ಬಿ ಅಂತಿಮ ವರ್ಷದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು.
ಬೆಂಗಳೂರಿನಲ್ಲಿ 1980ರ ಸೆಪ್ಟೆಂಬರ್ 5ರಂದು ವಕೀಲ ವೃತ್ತಿ ಆರಂಭಿಸಿದ್ದರು. 2004ರಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. 13 ವರ್ಷ 7 ತಿಂಗಳು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. 2019ರಲ್ಲಿ ಉಪ ಲೋಕಾಯುಕ್ತರಾಗಿ ನೇಮಕವಾಗಿದ್ದರು. ಇದೀಗ ಲೋಕಾಯುಕ್ತ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
![ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್](https://etvbharatimages.akamaized.net/etvbharat/prod-images/kn-vjp-02-lokayukta-appointment-av-ka10055_15062022111342_1506f_1655271822_469.jpg)
ವಸತಿ ಸಚಿವ ವಿ ಸೋಮಣ್ಣ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್, ಪಿ. ರಾಜೀವ್, ಕೆ. ಜೆ. ಜಾರ್ಜ್, ಎಂ. ಬಿ. ಪಾಟೀಲ್, ಈಶ್ವರ್ ಖಂಡ್ರೆ, ಲೋಕಾಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಮತ್ತು ನಿವೃತ್ತ ನ್ಯಾ. ಪಿ. ವಿಶ್ವನಾಥ್ ಶೆಟ್ಟಿ ಅವರೂ ಸೇರಿದಂತೆ ಹಲವು ಗಣ್ಯರು, ಕರ್ನಾಟಕ ಹೈಕೋರ್ಟ್‌ನ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು, ವಕೀಲ ವೃಂದದ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಕರ್ನಾಟಕ ಲೋಕಾಯುಕ್ತ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಹೊರಡಿಸಿರುವ ಅಧಿಸೂಚನೆಯನ್ನು ವಾಚಿಸಿದರು.
ಇದನ್ನೂ ಓದಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತಗಳಲ್ಲಿ ವ್ಯತ್ಯಾಸ ಕಂಡು ದಂಗಾದ ಅಧಿಕಾರಿಗಳು