ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು 15ಕ್ಕೂ ಅಧಿಕ ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ನಡೆದಿದೆ.
ಸೇವಾಲಾಲ್ ಭವನ ನಿರ್ಮಾಣ ವಿಚಾರವಾಗಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕಟ್ಟಿಗೆ, ದೊಣ್ಣೆ ಹಿಡಿದುಕೊಂಡು ಉಭಯ ಗುಂಪುಗಳು ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ಇನ್ನು ಒಂದು ಗುಂಪಿನ ಗಾಯಾಳುಗಳಿಗೆ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೊಂದು ಗುಂಪಿನ ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.