ವಿಜಯಪುರ: ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ಅದರಲ್ಲಿ ಛಟ್ಟಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆಯುವ ವಿಜಯಪುರ ಜಿಲ್ಲೆಯ ಅರಕೇರಿ ಜಾಲಗೇರಿ ಭಾಗದ ಮುಮ್ಮುಟ್ಟಿಗುಡ್ಡದ ಅಮೋಘಸಿದ್ದೇಶ್ವರನ ಜಾತ್ರೆಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳುತ್ತಾರೆ. ಈ ಜಾತ್ರೆಯನ್ನು ಭಂಡಾರದೊಡೆಯನ ಜಾತ್ರೆ ಎಂದೇ ಕರೆಯಲಾಗುತ್ತೆ.
ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ ಪಾರ್ವತಿಯರ ಸೇವಕರಾಗಿದ್ದರು. ಅಮೋಘ ಸಿದ್ದೇಶ್ವರನ ಸೇವೆಗೆ ಶಿವ ಪಾರ್ವತಿಯರು ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಶಕ್ತಿ ಕರುಣಿಸಿ ಭೂಲೋಕದಲ್ಲಿ ಸೇವೆ ಮಾಡುವಂತೆ ಹೇಳಿದರಂತೆ. ಭೂಲೋಕಕ್ಕೆ ಬಂದ ಅಮೋಘ ಸಿದ್ದೇಶ್ವರ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದರಂತೆ.
ಸಾವಿರಾರು ವರ್ಷಗಳ ಹಿಂದೆ ಅರಕೇರಿ ಜಾಲಗೇರಿ ಗ್ರಾಮದ ಮಧ್ಯೆದ ಮುಮ್ಮಟ್ಟಿಗುಡ್ಡದಲ್ಲಿ ನೆಲೆಸಿರುವ ಅಮೋಘ ಸಿದ್ದೇಶ್ವರ ಹಲವು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡುತ್ತಿದ್ದಾರೆ. ಮಕ್ಕಳಾಗದವರಿಗೆ ಸಂತಾನ ಭಾಗ್ಯ, ಸಿರಿಸಂಪತ್ತು, ಭಕ್ತರ ಕಷ್ಟ ಪರಿಹರಿಸೋ ಪವಾಡ ಪುರುಷರಾಗಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಮೂರು ದಿನಗಳ ಕಾಲ ಚೆಟ್ಟಿ ಅಮಾವಾಸ್ಯೆಯಂದು ಅಮೋಘ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಇಲ್ಲಿಯ ಮತ್ತೊಂದು ವಿಶೇಷತೆ ಎಂದರೆ ಜಾತ್ರೆಗೆಂದು ವಿವಿಧ ಗ್ರಾಮಗಳಿಂದ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುತರುತ್ತಾರೆ.
ಜಾತ್ರೆಗೆ ಆಗಮಿಸೋ ಪಲ್ಲಕ್ಕಿಗಳು ಭಂಡಾರಮಯವಾಗಿ ಭಕ್ತರ ಹರ್ಷೋದ್ಗಾರದ ಮಧ್ಯೆ ಅಮೋಘ ಸಿದ್ದೇಶ್ವರ ಗದ್ದುಗೆಯ ದರ್ಶನ ಮಾಡಿಸಲಾಗುತ್ತದೆ. ಬಳಿಕ ದೇಗುಲದ ಮುಂಭಾಗದಲ್ಲಿ ಪಲ್ಲಕ್ಕಿಗಳ ನೃತ್ಯ ನೆರವೇರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇಡೀ ಜಾತ್ರೆ ಭಂಡಾರಮಯವಾಗಿರುತ್ತೆ, ಹರಕೆ ಹೊತ್ತ ಭಕ್ತರು ಪಲ್ಲಕ್ಕಿಗಳಿಗೆ ಭಂಡಾರವನ್ನು ಎರಚುತ್ತಾರೆ. ಭಂಡಾರ ಜಾತ್ರೆ, ಬಂಗಾರ ಜಾತ್ರೆ ಎಂದು ಭಕ್ತರು ಮೂರು ದಿನಗಳ ಕಾಲ ಸಂಭ್ರಮದಿಂದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
ಯಾವುದೇ ಜಾತಿ ಮತ, ಪಂಥ ಭೇದವಿಲ್ಲದೇ ಎಲ್ಲರೂ ಈ ಜಾತ್ರೆಯಲ್ಲಿ ಭಾಗಿಯಾಗುವುದು ವಿಶೇಷ. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಅದ್ಧೂರಿ ಜಾತ್ರೆ ನಡೆದಿರಲಿಲ್ಲ. ಕಳೆದ ವರ್ಷ ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ ಜಾತ್ರೆಯ ಆಚರಣೆ ಅದ್ಧೂರಿಯಾಗಿ ನಡೆದಿತ್ತು. ಈ ವರ್ಷದ ಗುಡ್ಡಾಪುರದ ದಾನಮ್ಮದೇವಿ ಜಾತ್ರೆ ಮತ್ತು ಅರಕೇರಿಯಲ್ಲಿನ ಅಮೋಘಸಿದ್ದೇಶ್ವರನ ಜಾತ್ರೆಗಳನ್ನು ಒಟ್ಟಿಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತಿದೆ. ಮಹಾರಾಷ್ಟ್ರ ಕರ್ನಾಟಕ ಗಡಿಭಾಗದ ಅರಕೇರಿ, ಜಾಲಗೇರಿ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: 5 ದಿನ, 2 ಕೋಟಿಗೂ ಹೆಚ್ಚು ಹಣ: ಮಾದಪ್ಪನ ಬೆಟ್ಟದ ಜಾತ್ರೆ - ಭಕ್ತರಿಂದ ಆದಾಯ "ಅಕ್ಷಯ ಪಾತ್ರೆ"!!