ವಿಜಯಪುರ: ಇಂಡಿ ತಾಲೂಕಿನ ಜ್ಞಾನಯೋಗಿ ಸಕ್ಕರೆ ಕಾರ್ಖಾನೆ ಕಳೆದ ಹತ್ತು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ. ಆದ್ದರಿಂದ ವೇತನ ನೀಡಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆಯಲ್ಲಿ ದುಡಿಯುತ್ತಿರುವ 100ಕ್ಕೂ ಅಧಿಕ ಕಾರ್ಮಿಕರಿಗೆ ಆಡಳಿತ ಮಂಡಳಿ ವೇತನ ನೀಡದೆ ಸತಾಯಿಸುತ್ತಿದೆ. ವೇತನ ಕೇಳಿದ್ರೆ ಇಂದು ಬಾ ನಾಳೆ ಬಾ ಎಂದು ಹೇಳುತ್ತಿದ್ದಾರೆ. ನಾವು ಬಡವರು, ವೇತನ ನೀಡದ ಕಾರಣ ಆರ್ಥಿಕ ಸಂಕಷ್ಟದಿಂದ ಜೀವನ ನಡೆಸಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ವೇತನ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕರಿಗೆ ಭರವಸೆ ನೀಡಿದರು.