ವಿಜಯಪುರ: ಆಟೋ ಚಾಲನೆ ಪರವಾನಿಗೆ, ಡಿಎಲ್ ತರಬೇತಿ ಸೇರಿದಂತೆ ಅನೇಕ ಕಾರ್ಯಗಳಿಗೆ ಸಾರಿಗೆ ಕಚೇರಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಆಟೋ ರಿಕ್ಷಾ ಯೂನಿಯನ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾರಿಗೆ ಕಚೇರಿಯಲ್ಲಿ ವಾಹನ ಪರವಾನಿಗೆ, ಪರವಾನಿಗೆ ನವೀಕರಣ ಕಾರ್ಯಗಳಿಗೆ ಅಧಿಕಾರಿಗಳು ಸರಿಯಾಗಿ ಆಟೋ ಚಾಲಕರಿಗೆ ಸ್ಪಂದಿಸುತ್ತಿಲ್ಲ. ಬ್ಯಾಕ್ ಲಾಗ್ ಎಂಟ್ರಿ ಮಾಡುವ ಕೆಲಸ ಕೂಡ ಕಚೇರಿಯಲ್ಲಿ ಆಗುತ್ತಿಲ್ಲ. ರಿನಿವಲ್ ಕೇಳಿದ್ರೆ ಧಾರವಾಡ ಸಾರಿಗೆ ಕಚೇರಿಗೆ ಹೋಗಿ ಬನ್ನಿ ಎಂದು ಹೇಳುತ್ತಿದ್ದಾರೆ. ಅಲ್ಲದೆ ಕೆಲವು ಏಜೆಂಟ್‌ಗಳ ಮೂಲಕ ಸಾರ್ವಜನಿಕರಿಂದ ಹಾಗೂ ಚಾಲಕರಿಂದ ಹೆಚ್ಚಿನ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕೊರೊನಾದಿಂದ ದುಡಿಮೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆ ಉಂಟಾಗಿದ್ದು, ಸಾರಿಗೆ ಕಚೇರಿಯ ಅವ್ಯವಸ್ಥೆ ಸುಧಾರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.