ವಿಜಯಪುರ: 2023ರ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ಮುಖಂಡರು ಅರ್ಹ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಜಾತ್ಯಾತೀತ ಜನತಾದಳ (ಜೆಡಿಎಸ್) ವಿಜಯಪುರ ಜಿಲ್ಲೆಯ 8 ಮತಕ್ಷೇತ್ರಗಳ ಪೈಕಿ ವಿಜಯಪುರ ನಗರ ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಈ ನಿರ್ಧಾರ ಜೆಡಿಎಸ್ ಮತಪೆಟ್ಟಿಗೆಯ ಬುಡ ಅಲುಗಾಡಿಸಲು ಆರಂಭಿಸಿದೆ. ಜಾತಿವಾರು ಲೆಕ್ಕಾಚಾರ ಕಡೆಗಣಿಸಿ ಏಳು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡದಿರುವುದು ಬಂಡಾಯದ ಬಿಸಿ ಹೆಚ್ಚಿಸಿದೆ.
ಪರೋಕ್ಷವಾಗಿ ಯತ್ನಾಳ್ ಗೆಲ್ಲಿಸುವ ಹುನ್ನಾರ: ಸದ್ಯ ಟಿಕೆಟ್ ನೀಡಿರುವ ಅಭ್ಯರ್ಥಿಗಳ ಮರುಪರಿಶೀಲನೆ ನಡೆಸಿ ಹೆಚ್ಚು ಅಲ್ಪಸಂಖ್ಯಾತರ ಮತಗಳು ಇರುವ ಕ್ಷೇತ್ರವನ್ನು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಬೇಕು. ಇಲ್ಲವಾದರೆ ಸಾಮೂಹಿಕ ರಾಜೀನಾಮೆ ಸಲ್ಲಿಸುವ ಬೆದರಿಕೆಯ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ. ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡದೇ ಕಾಯ್ದಿರಿಸಿದ್ದು, ವರಿಷ್ಠರು ಹೊಂದಾಣಿಕೆ ರಾಜಕಾರಣ ಮಾಡಲು ಹೊರಟಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಗೆಲ್ಲಿಸಲು ತೆರೆಮರೆಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈಗಾಗಲೇ ಕೆಪಿಸಿಸಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತ ಮತಗಳಿದ್ದು, ಈ ಮತಗಳನ್ನು ವಿಭಜನೆ ಮಾಡಿ ಪರೋಕ್ಷವಾಗಿ ಯತ್ನಾಳ ಗೆಲ್ಲಿಸುವ ಹುನ್ನಾರ ನಡೆಯುತ್ತಿದೆ ಎನ್ನುವುದು ಜೆಡಿಎಸ್ ಪಕ್ಷದ ಹಿರಿಯ ಮುಖಂಡರೊಬ್ಬರ ಆರೋಪ.
ವಿಜಯಪುರ ನಗರಕ್ಕೆ ಜೆಡಿಎಸ್ ಕೂಡಾ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿ ಅಲ್ಪಸಂಖ್ಯಾತ ಮತ ವಿಭಜನೆ ನಡೆಸುವ ಪ್ಲ್ಯಾನ್ ನಡೆಸುತ್ತಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷರು ಏಕಮುಖವಾಗಿ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿದ್ದಾರೆ ಎನ್ನುವ ಆರೋಪಗಳಿವೆ.
ಸದ್ಯ ಜೆಡಿಎಸ್ ಬಿಡುಗಡೆ ಮಾಡಿರುವ ಏಳು ಮತಕ್ಷೇತ್ರದ ಅಭ್ಯರ್ಥಿಗಳಲ್ಲಿ ನಾಲ್ವರು ಅಭ್ಯರ್ಥಿಗಳು ಸ್ವತಃ ಜಿಲ್ಲಾ ಜೆಡಿಎಸ್ ಮುಖಂಡರಿಗೆ ಪರಿಚಯ ಹೋಗಲಿ ಅವರ ಮುಖವೇ ನೋಡಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಅವರ ಪಕ್ಷದ ವರಿಷ್ಠರ ದಾರಿತಪ್ಪಿಸಿ ತಪ್ಪು ಮಾಹಿತಿ ನೀಡಿ ಟಿಕೇಟ್ ಕೊಡಿಸಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಸಭೆ ನಡೆಸದೇ ಏಕಮುಖ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಲ್ಪ ಸಂಖ್ಯಾತರ ಮುಖಂಡರು ಹೇಳುತ್ತಿದ್ದಾರೆ.
ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ: ವಿಜಯಪುರ ಜಿಲ್ಲೆಯ 8 ಮತಕ್ಷೇತ್ರಗಳ ಪೈಕಿ ಮುದ್ದೇಬಿಹಾಳ- ಡಾ. ಚನ್ನಬಸಪ್ಪ ಸೋಲಾಪುರ, ದೇವರಹಿಪ್ಪರಗಿ- ರಾಜುಗೌಡ ಪಾಟೀಲ, ಬಸವನಬಾಗೇವಾಡಿ-ಪರಮಾನಂದ ತನಿಖೆದಾರ, ಬಬಲೇಶ್ವರ- ಬಸವರಾಜ ಹೊನವಾಡ, ನಾಗಠಾಣ(ಮೀಸಲು)- ದೇವಾನಂದ ಚವ್ಹಾಣ, ಇಂಡಿ- ಬಿ.ಡಿ. ಪಾಟೀಲ, ಸಿಂದಗಿ- ಶಿವಾನಂದ ಪಾಟೀಲ. ವಿಜಯಪುರ ನಗರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಹಿಂದಿದೆ. ಕಳೆದ ಚುನಾವಣೆಯಲ್ಲಿ ನಾಗಠಾಣ ಮತಕ್ಷೇತ್ರದಲ್ಲಿ ದೇವಾನಂದ ಚವ್ಹಾಣ ಮಾತ್ರ ಗೆಲುವು ಸಾಧಿಸಿದ್ದರು. ಅವರನ್ನು ಹೊರತುಪಡಿಸಿ ಎಂಪಿ ಚುನಾವಣೆಯಲ್ಲಿ ಶಾಸಕ ಚವ್ಹಾಣ ಅವರ ಪತ್ನಿಯನ್ನು ಕಣಕ್ಕೆ ಇಳಿಸಿ ಜೆಡಿಎಸ್ ಕೈ ಸುಟ್ಟುಕೊಂಡಿತ್ತು.
ಈಗ ತರಾತುರಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಪಕ್ಷದ ವಿರುದ್ಧ ಅಲ್ಪಸಂಖ್ಯಾತ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು?