ಮುದ್ದೇಬಿಹಾಳ (ವಿಜಯಪುರ): ಕಳೆದ ನಾಲ್ಕೈದು ದಿನಗಳಿಂದ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿಯಲ್ಲಿದ್ದ ತಾಲೂಕಿನ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆಯನ್ನ ಸೇವೆಯಿಂದ ಅಮಾನತುಗೊಳಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಆರ್.ಆಲಗೂರು ಗ್ರಾಮಸ್ಥರ ಎದುರಿಗೆ ಹೇಳಿದ್ದಾರೆ.
ತಾಲೂಕಿನ ಲೊಟಗೇರಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಗ್ರಾಮಸ್ಥರ ಆರೋಪಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಹಾಗೂ ಇಲ್ಲಿನ ಅವ್ಯವಸ್ಥೆಯನ್ನು ಗಮನಿಸಿದ್ದು, ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸುವುದಾಗಿ ಹೇಳಿದರು. ಅಲ್ಲದೇ ಈ ಅಂಗನವಾಡಿಗೆ ಬೇರೆಯವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರು ಇಲಾಖೆಯ ಉಪ ನಿರ್ದೇಶಕರ ಎದುರಿಗೂ ಕಾರ್ಯಕರ್ತೆಯ ಬೇಜವಾಬ್ದಾರಿತನವನ್ನು ಬಿಚ್ಚಿಟ್ಟರು. ಡಿಎಸ್‌ಎಸ್ ಸಂಘಟನೆಯ ಮುಖಂಡ ಮಲ್ಲು ತಳವಾರ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಾಪುಗೌಡ ಪಾಟೀಲ, ಇಲಾಖೆಯ ನಿರೂಪಣಾಧಿಕಾರಿ ಕೆ.ಕೆ. ಚವ್ಹಾಣ, ಸಿಡಿಪಿಒ ಸಾವಿತ್ರಿ ಗುಗ್ಗರಿ, ಮೇಲ್ವಿಚಾರಕಿಯರಾದ ಪಿ.ಎಸ್.ಸಜ್ಜನ, ವಿಜಯಲಕ್ಷಿ ಮಂಟರೂಕರ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.