ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಮಾನವ ಕುಲಕ್ಕೆ ಹಾಗೂ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿದ್ದು, ಮುಂದಿನ ಪೀಳಿಗೆಗೆ ಅವರ ವಿಚಾರಧಾರೆಗಳನ್ನು ತಿಳಿ ಹೇಳುವ ಕಾರ್ಯ ನಡೆಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಹೇಳಿದರು.
ಅಂಬೇಡ್ಕರ್ ಜಯಂತಿ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಮಾನವ ಕುಲಕ್ಕೆ, ಮಹಿಳಾ ಸಮಾನತೆಗೆ ಹಾಗೂ ಶೋಷಿತ ವರ್ಗಗಳಿಗೆ ಅವರು ನ್ಯಾಯ ಒದಗಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಅಂತೆಯೇ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದು, ಡಾ.ಅಂಬೇಡ್ಕರ್ ಅವರ ತತ್ವ, ಆದರ್ಶಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ. ಅವರ ಮಹತ್ತರವಾದ ವಿಚಾರ ಧಾರೆಗಳು ಮುಂದಿನ ಪೀಳಿಗೆಗೆ ತಿಳಿ ಹೇಳಬೇಕಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಒಂದೇ ದಿನ 11,265 ಮಂದಿಗೆ ಸೋಂಕು ದೃಢ
ಜನ ಪ್ರತಿನಿಧಿಗಳ ಕಾಳಜಿ ಹಾಗೂ ಹೋರಾಟದ ಫಲವಾಗಿ ಜಿಲ್ಲಾಡಳಿತದ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು ಜಿಲ್ಲಾ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ವೃತ್ತದಲ್ಲಿ ನೂತನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಿ, ಮುಂಬರುವ ವರ್ಷಗಳಿಂದ ಜಯಂತಿ ನಿಮಿತ್ತ ಅಲ್ಲಿಯೇ ಗೌರವಾರ್ಪಣೆ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಡಿಸಿ ಕಚೇರಿಯಲ್ಲಿ:
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಹಿನ್ನೆಲೆ ಅಂಬೇಡ್ಕರ್ ಜಯಂತಿ ಸರಳವಾಗಿ ಆಚರಿಸಲಾಯಿತು. ಸಂಸದ ರಮೇಶ ಜಿಗಜಿಣಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು.