ವಿಜಯಪುರ: ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಮಾಡಲು ಸರ್ಕಾರದ ಕೆಲವು ನಿರ್ದೇಶನಗಳು ಗೊಂದಲ ಮೂಡಿಸಿವೆ. ಸರ್ಕಾರ ಕೂಡಲೇ ಮರು ಪರಶೀಲನೆ ನಡೆಸಿ, ಹಬ್ಬದ ಆಚರಣೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿ ವರ್ಷವೂ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಸರ್ಕಾರ 4 ಅಡಿ ಎತ್ತರದ ಮೂರ್ತಿಗಳನ್ನು ಪೂಜೆ ಮಾಡಲು ಆದೇಶ ನೀಡಿರುವುದು ಗಣೇಶ ಉತ್ಸವ ಕಮಿಟಿಗಳಿಗೆ ತಲೆನೋವಾಗಿದೆ. ತುರ್ತಾಗಿ ಸರ್ಕಾರ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡ ಮುಂಚಿತವಾಗಿ ಸಭೆ ನಡೆಸಿ, ನಿಯಮಗಳನ್ನ ತಿಳಿಸಿಲ್ಲ ಎಂದು ಆರೋಪಿಸಿದರು.
ಮಂಡಳಿ ಸದಸ್ಯರು ಅನುಮತಿ ಕುರಿತು ಜಿಲ್ಲಾಡಳಿತದ ಜೊತೆ ಮಾತನಾಡಲು ತೆರಳಿದರೆ ಸ್ಪಂದಿಸಿಲ್ಲ. ಸಾಮೂಹಿಕ ಆಚರಣೆಯನ್ನು ಹತ್ತಿಕ್ಕಿವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ದೂರಿದರು.
ಕೊರೊನಾ ಆತಂಕಕ್ಕೆ ಸರ್ಕಾರ ನಿಯಮಾವಳಿ ರಚಿಸಲಿ. ನಿಯಮಾನುಸಾರ ಹಬ್ಬದ ಆಚರಣೆ ಮಾಡುತ್ತೇವೆ. ಆದರೆ ಕೆಲವು ಬಡಾವಣೆಗಳಲ್ಲಿ ರಸ್ತೆಗಳ ಮೇಲೆಯೇ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಅವುಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬೇಕು. ಸಾರ್ವಜನಿಕ ಉತ್ಸವಕ್ಕೆ ಆನ್‌ಲೈನ್ ಮೂಲಕ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಮನೆಯಲ್ಲಿಯೇ ವಿಸರ್ಜನೆ ಸರಿಯಲ್ಲ: ಗಣೇಶ ವಿಸರ್ಜನೆಯನ್ನು ಮನೆಗಳಲ್ಲಿ ಮಾಡುವುದು ಸರಿಯಲ್ಲ. ಇದು ಜನರ ಭಕ್ತಿ ಹಾಗೂ ಭಾವನೆಗಳಿಗೆ ಧಕ್ಕೆ ತರುತ್ತದೆ. ಜಿಲ್ಲಾಡಳಿತ ವಿಸರ್ಜನೆಗೆ ಹೊಂಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಮಹಾನಗರದ ರಸ್ತೆ ದುರಸ್ತಿ ಹಾಗೂ ಹಬ್ಬದ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.