ವಿಜಯಪುರ: ಕೊರೊನಾದಿಂದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ರೋಗಿಯ ಕುಟುಂಬದವರು ಆಸ್ಪತ್ರೆ ಎದುರು ಕಲ್ಲು ತೂರಾಟ ನಡೆಸಿದ ಘಟನೆ ನಗರದ ಬಂಜಾರಾ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ.
ಆಸ್ಪತ್ರೆ ಅಂಬುಲೇನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ ಮೃತನ ಸಂಬಂಧಿಕರ ಮಹಿಳೆಯರು, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಬುಲೆನ್ಸ್ ಗ್ಲಾಸ್ಗಳು ಪುಡಿಪುಡಿಯಾಗಿದ್ದು, ಆಂಬುಲೆನ್ಸ್ ಜಖಂಗೊಂಡಿದೆ.
ಕೊರೊನಾ ಲಕ್ಷಣ ಹಿನ್ನೆಲೆ ಕಾಶಿನಾಥ ಚೌವ್ಹಾಣ (59) ಎಂಬುವರನ್ನು ಬಂಜಾರಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂಡಿ ತಾಲೂಕಿನ ಹೊರ್ತಿ ಬಳಿಯ ಹಡಲಸಂಗ ತಾಂಡಾ ನಿವಾಸಿ ಕಾಶಿನಾಥ ಚೌವ್ಹಾಣ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಮೃತನ ಕುಟುಂಬದವರು ತಡರಾತ್ರಿ ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ.
ಕಳೆದ ಆಗಸ್ಟ್ 17ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶೇ. 50ರಷ್ಟು ಲಂಗ್ಸ್ ಹಾಳಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಕೊರೊನಾ ಕೂಡ ದೃಢಪಟ್ಟಿತ್ತು ಎನ್ನಲಾಗಿದೆ. ಆದರೆ ಅನವಶ್ಯಕವಾಗಿ ನಿದ್ರೆ ಇಂಜೆಕ್ಷನ್ ನೀಡಿದ್ದರಿಂದ ಕಾಶಿನಾಥ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ.
ರೋಗಿ ಆಕ್ಸಿಜನ್ ಪೈಪ್ ಕೀಳುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ನಿದ್ರೆ ಇಂಜೆಕ್ಷನ್ ನೀಡಿದ್ದಾರೆ. ನಿದ್ರೆ ಇಂಜೆಕ್ಷನ್ ನೀಡಿದ ಬಳಿಕ ಕಾಶಿನಾಥ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈವರೆಗೆ 6 ಲಕ್ಷ ರೂ. ಹಣ ಕಟ್ಟಿಸಿಕೊಂಡು, ಈಗ ಮತ್ತೆ 3 ಲಕ್ಷ ರೂ. ಹಣ ಕಟ್ಟಬೇಕು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಈ ವಿಚಾರದಲ್ಲಿ ಆಸ್ಪತ್ರೆ ಸಿಬ್ಬಂದಿ ಜೊತೆಗೆ ರೋಗಿ ಕುಟುಂಬಸ್ಥರು ಗಲಾಟೆ ಮಾಡಿಕೊಂಡಿದ್ದಾರೆ. ರೊಚ್ಚಿಗೆದ್ದ ಕಾಶಿನಾಥ ಕುಟುಂಬಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದ ಆಸ್ಪತ್ರೆಯ ಆಂಬುಲೆನ್ಸ್ ಸಂಪೂರ್ಣ ಜಖಂಗೊಂಡಿದೆ. ಕಾಶಿನಾಥಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗಾಂಧಿ ಚೌಕ ಪಿಎಸ್ಐ ಆಶೀಪ್ ಮುಶಾಪುರಿ ಭೇಟಿ ಪರಿಶೀಲನೆ ನಡೆಸಿದ್ದಾರೆ.