ವಿಜಯಪುರ: ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತದೆ ಸರ್ಕಾರದ ಉಳಿವಿಗಾಗಿ ಸಚಿವರ ರಾಜೀನಾಮೆ ಪಡೆಯುವುದು ಸೇರಿದಂತೆ ಹೈಕಮಾಂಡ್ ನೀಡುವ ಸೂಚನೆಗಳನ್ನು ಪಾಲಿಸಲು ಎಲ್ಲರೂ ಬದ್ಧರಿದ್ದೇವೆ. ಮೈತ್ರಿ ಸರ್ಕಾರ ಅಸ್ಥಿರವಾಗಿಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ವಿಜಯಪುರದ ಬರಟಗಿ ತಾಂಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ನಾವು ಬದ್ಧವಾಗಿದ್ದು, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು. ಬಿಜೆಪಿಯವರು ಹಿಂಬಾಗಿಲಿನಿಂದ ಆಪರೇಷನ್ ನಡೆಸುತ್ತಿದ್ದಾರೆ. ಈ ಹಿಂದೆ ನಡೆಸಿದ ಆಪರೇಷನ್ ಸಂಗತಿ ನಿಮಗೆಲ್ಲಾ ಗೊತ್ತು. ರಮೇಶ್ ಜಾರಕಿಕೋಳಿ, ಆನಂದ್ ಸಿಂಗ್ ಕಾಂಗ್ರೆಸ್ ತತ್ವ-ಸಿದ್ಧಾಂತ ಒಪ್ಪಿರುವವರು. ಮೈತ್ರಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಇದನ್ನು ಸಹಿಸದೇ ಬಿಜೆಪಿಯವರು ಅಡೆತಡೆ ಮಾಡುತ್ತಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಿರ್ದೇಶನದಂತೆ ನಡೆಯುತ್ತೇವೆ. ಸರ್ಕಾರ ಸರಿಯಾಗಿ ನಡೆಯಲು ವರಿಷ್ಠರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಶರಾವತಿ ನದಿ ನೀರನ್ನು ರಾಜಧಾನಿ ಬೆಂಗಳೂರಿಗೆ ತರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಖಾದರ್, ನದಿ ನೀರನ್ನು ರಾಜಧಾನಿಗೆ ತರುವುದಕ್ಕೆ ವಿರೋಧವಾಗಿದೆ. ಈ ಸಮಸ್ಯೆಯನ್ನು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ನೋಡಿಕೊಳ್ಳಲಿದ್ದಾರೆ. ಇದೆಲ್ಲಾ ಪ್ರಜಾಪ್ರಭುತ್ವದಲ್ಲಿ ಸಹಜ. ನೀರು, ಮಣ್ಣು ಒಂದು ಪ್ರದೇಶದ ಸ್ವತ್ತಲ್ಲ. ಇವೆಲ್ಲಾ ರಾಷ್ಟ್ರೀಯ ಸಂಪತ್ತು. ನಾವು ಬದುಕಬೇಕು ಹಾಗೂ ಮತ್ತೊಬ್ಬರನ್ನು ಬದುಕಿಸಬೇಕು. ಹಾಗಾಗಿ ಯಾರೂ ವಿರೋಧ ಮಾಡಬಾರದು ಎಂದರು.