ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದೇ ರೀತಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನತೆ ಮುನ್ನೆಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಸೂಚಿಸಿದೆ.
ಇಂದು ಬೆಳಗ್ಗೆಯವರೆಗೆ ಜಲಾಶಯದ ನೀರಿನ ಮಟ್ಟ 517.76 ಮೀಟರ್ ಇದ್ದು, ಒಟ್ಟು 94.365 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. 57,025 ಕ್ಯೂಸೆಕ್ ಒಳಹರಿವು ಇದೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಹೊರ ಹರಿವನ್ನೂ ಸಹ ಹೆಚ್ಚಿಸಲಾಗಿದೆ. ಸುಮಾರು 31,922 ಕ್ಯೂಸೆಕ್ಗೆ ನೀರನ್ನ ಹೊರಗೆ ಹರಿಸಲಾಗುತ್ತಿದೆ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದರೆ, ಎರಡು ದಿನದಲ್ಲಿ ಒಳ ಹರಿವು 1ಲಕ್ಷ ಕ್ಯೂಸೆಕ್ಗೆ ಏರಿಕೆ ಆಗುವ ಸಾಧ್ಯತೆಗಳಿವೆ.
ಪ್ರವಾಹ ಭೀತಿ ಇಲ್ಲ:
ಪ್ರಸ್ತಕ ವರ್ಷ ಜಲಾಶಯ ಭರ್ತಿಯಾಗಲು ಇನ್ನೂ ಎರಡು ಅಡಿ ನೀರು ಸಂಗ್ರಹವಾಗಬೇಕಾಗಿದೆ. ಪ್ರವಾಹ ಎದುರಾಗಬಹುದೆಂದು ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯ ಭರ್ತಿ ಮಾಡಿಲ್ಲ ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ. 123.081 ಟಿಎಂಸಿ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಇಲ್ಲಿಯವರೆಗೆ 94.365 ಟಿಎಂಸಿ ನೀರು ಸಂಗ್ರಹವಿದೆ.
ಆಲಮಟ್ಟಿ ಜಲಾಶಯದಿಂದ 32,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ಒಳಹರಿವು ಹೆಚ್ಚಳವಾದಲ್ಲಿ ಮತ್ತಷ್ಟು ನೀರು ಹೊರ ಬಿಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಗ್ರಾಮಗಳಲ್ಲಿ ಡಂಗೂರ ಸಾರಲು ಸೂಚನೆ ನೀಡಿದೆ.