ವಿಜಯಪುರ: ವ್ಯವಸಾಯದಿಂದ ನಷ್ಟ ಅನುಭವಿಸಿ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಈ ಕಾಲದಲ್ಲಿ, ಕೃಷಿಯನ್ನು ನಂಬಿ ಕೊಟ್ಯಂತರ ಆದಾಯ ಗಳಿಸಬಹುದು ಎಂದು ಕೃಷಿ ಪ್ರಧಾನ ಕುಟುಂಬವೊಂದು ತೋರಿಸಿಕೊಟ್ಟಿದೆ.
ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ಸಿದ್ದರಾಯ ಕುಂಬಾರ ಅವರ ಕುಟುಂಬಸ್ಥರು, ಕೃಷಿ ಕಾಯಕದಿಂದ ವಾರ್ಷಿಕವಾಗಿ 1 ಕೋಟ್ಯಂತರ ಮೌಲ್ಯದ ಬೆಳೆಯನ್ನು ಬೆಳೆಯುತ್ತಾರೆ. ಎಲ್ಲಾ ಖರ್ಚು ತೆಗೆದು 50 ಲಕ್ಷ ರೂಪಾಯಿ ಆದಾಯವನ್ನು ಗಳಿಸುತ್ತಾರೆ.
ಹೊಲದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು, ಸುಮಾರು 35 ಎಕರೆಯಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. 7ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಒಟ್ಟು 50 ಎಕರೆ ಭೂಮಿ ಹೊಂದಿರುವ ಈ ಕುಟುಂಬ, ತೋಟಗಾರಿಕೆ ಬೆಳೆ ಬೆಳೆಯಲು ಒಟ್ಟು 4 ಬೃಹತ್ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ದ್ರಾಕ್ಷಿ, ನಿಂಬೆ, ದಾಳಿಂಬೆ ಸೇರಿದಂತೆ ಹತ್ತಾರು ತೋಟಗಾರಿಕೆ ಹಾಗೂ ಕೃಷಿ ಆಧಾರಿತ ಸಾವಯವ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.
ಕೃಷಿ ಹೊಂಡ ನಿರ್ಮಿಸಲು ಸರ್ಕಾರವೇ ಸಬ್ಸಿಡಿ ನೀಡುತ್ತಿರುವ ಕಾರಣ, ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿ ಹೊಂಡ ನಿರ್ಮಾಣಗೊಳ್ಳುತ್ತಿವೆ. ಈ ಮೂಲಕ ಬರದ ನಾಡು ಎನ್ನುವ ಕುಖ್ಯಾತಿ ಹೊಂದಿರುವ ವಿಜಯಪುರ ಜಿಲ್ಲೆ, ಈಗ ಸಂಪದ್ಭರಿತ ಜಿಲ್ಲೆಯತ್ತ ಮುಖ ಮಾಡುತ್ತಿರುವದು ಅನ್ನದಾತರಿಗೆ ಆಶಾಕಿರಣವಾಗಿದೆ.