ವಿಜಯಪುರ: ಸಂಕಷ್ಟದಲ್ಲಿರುವ ವಿಕಲಚೇತನರು, ವಿಧವೆಯರು ಮತ್ತು ಹಿರಿಯ ನಾಗರೀಕರಿಗೆ ನೀಡಬಹುದಾದ ಸೌಲಭ್ಯಗಳನ್ನು ಆದ್ಯತೆ ಮೇಲೆ ದೊರಕಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತ್ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಪಿಂಚಣಿ ಅದಾಲತ್ ನಿರಂತರ ನಡೆಸುವ ಮೂಲಕ ಅರ್ಹ ಫಲಾನುಭವಿಗಳಿಗೆ ನೆರವಾಗಬೇಕು ಎಂದರು.
ರಾಜ್ಯ ಸರ್ಕಾರ ಹಿರಿಯ ನಾಗರಿಕರ ಪಿಂಚಣಿಗಾಗಿ ಪ್ರತಿ ವರ್ಷ 7 ಸಾವಿರ ಕೋಟಿ ರೂಪಾಯಿ ನೀಡುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ದೊರೆಯಬೇಕು. ನೇರವಾಗಿ ಪಿಂಚಣಿ ವೇತನ ಅವರ ಖಾತೆಗೆ ಜಮೆಯಾಗಲು, ಅವರ ಖಾತೆಗೆ ಆಧಾರ್ ಲಿಂಕ್ ಮಾಡುವುದರಿಂದ ಅನರ್ಹರಿಗೆ ಈ ಸೌಲಭ್ಯ ದೊರೆಯದಂತೆ ನೋಡಿಕೊಳ್ಳಬಹುದಾಗಿದೆ.ತಕ್ಷಣ ವೃದ್ದಾಪ್ಯ ವೇತನ ಪ್ರತ್ಯೇಕ ಘಟಕದ ಮತ್ತು ಸಾಫ್ಟ್ವೇರ್ ಮೂಲಕ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಈ ಹಿಂದೆ ಅನರ್ಹರ ಖಾತೆಗೆ ಮತ್ತು ನಿಧನವಾದವರ ಖಾತೆಗೆ ಜಮೆಯಾದ ಹಣ ವಾಪಸ್ ಸರ್ಕಾರಕ್ಕೆ ಜಮೆಯಾಗುವಂತೆ ಎಚ್ಚರವಹಿಸಬೇಕು. ಅದರಂತೆ ಹಿರಿಯ ನಾಗರಿಕರು, 60 ವಯೋಮಾನ ಪೂರ್ಣಗೊಳಿಸಿದವರು ಜಿಲ್ಲಾ ಮತ್ತು ತಾಲೂಕಾ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸಂಬಂಧಪಟ್ಟ ಫಲಾನುಭವಿಗಳ ಮನೆ ಬಾಗಿಲಿಗೆ ಅಧಿಕಾರಿಗಳು ಖುದ್ದಾಗಿ ತಲುಪಿ, ಅರ್ಜಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವಂತಹ ವಿನೂತನ ಯೋಜನೆ ಜಾರಿಗೊಳಿಸುವ ಸದುದ್ದೇಶ ತಾವು ಹೊಂದಿರುವುದಾಗಿ ತಿಳಿಸಿದರು. ಈ ಯೋಜನೆ ಜಾರಿಯಿಂದ ಫಲಾನುಭವಿಗಳ ಮನೆಬಾಗಿಲಿಗೆ ಮಂಜೂರಾತಿ ಪತ್ರ ದೊರೆಯುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹಾಗೂ ರಾಜ್ಯದ ಪ್ರತಿ ಗ್ರಾಮಕ್ಕೆ ಸ್ಮಶಾನ ಭೂಮಿ ಇರುವಂತಹ ಕ್ರಮ ಸಹ ಕೈಗೊಳ್ಳಲಾಗುತ್ತಿದ್ದು, ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸರ್ಕಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು. ಸರ್ಕಾರದ ಒತ್ತುವರಿ ಜಮೀನನ್ನು ತಕ್ಷಣ ತೆರವುಗೊಳಿಸುವ ಜೊತೆಗೆ ಸಾಧ್ಯವಿದ್ದಲ್ಲಿ ಸ್ಮಶಾನ ಭೂಮಿಗೆ ನಿವೇಶನ ಒದಗಿಸಲು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ವಿಧಾನಸೌಧ ಕಟ್ಟಡ, ಅಗ್ನಿಶಾಮಕ ದಳ, ತಾಲೂಕಾ ಕ್ರೀಡಾಂಗಣ ವಿವಿಧ ಕಾಲೇಜು ಮತ್ತು ವಸತಿ ಗೃಹಗಳ ನಿರ್ಮಾಣಕ್ಕಾಗಿ 137 ಎಕರೆ ಜಮೀನನ್ನು ಒದಗಿಸಿದ್ದು, ಈ ಜಮೀನು ಸಮರ್ಪಕವಾಗಿ ಬಳಕೆಯಾಗಬೇಕು. ನಗರ ಶಾಸಕರು ನೀಡಿದ ದೂರಿನ ಅನ್ವಯ, ಈಗಾಗಲೇ ನಗರದಲ್ಲಿ ವಕ್ಫ್ ಆಸ್ತಿಯಾಗಿ ಪರಿವರ್ತಿಸಿದ ಸ್ಥಳಗಳ ಬಗ್ಗೆ ಸೂಕ್ತ ಪರಿಶೀಲನೆ ಸಹ ನಡೆಸುವಂತೆ ಅವರು ಸೂಚನೆ ನೀಡಿದರು.
ನಗರದ ರಸ್ತೆ ದುರಸ್ತಿ: ನಗರದ ರಸ್ತೆ ದುರಸ್ತಿಗಾಗಿ ಸಿದ್ಧಪಡಿಸಲಾಗುತ್ತಿರುವ 10 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಸಂಬಂಧಪಟ್ಟಂತೆ ಮಳೆ ಹಾನಿಯಿಂದ ಒಳಗಾದ ಈ ರಸ್ತೆಗಳ ಸುಧಾರಣೆಗೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅನುದಾನ, ಎನ್ಡಿಆರ್ಎಫ್ ಅನುದಾನ, ಲೋಕೋಪಯೋಗಿ ವ್ಯಾಪ್ತಿಯ ರಸ್ತೆಗಳ ಹಾನಿ ಕುರಿತ ಅನುದಾನ ಬಳಕೆಗೆ ಅವರು ಸೂಚನೆ ನೀಡಿದರು.
ಪ್ರಕೃತಿ ವಿಕೋಪದ ಅಡಿಯಲ್ಲಿ ಈಗಾಗಲೇ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಅರ್ಹ ಫಲಾನುಭವಿಗಳಿಗೆ ಪರಿಹಾರ ಸೌಲಭ್ಯ ದೊರಕಿಸಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನೈಜ ಹಾನಿ ಪ್ರಮಾಣ ಪರಿಶೀಲಿಸಿ, ವರದಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಪ್ರಸಕ್ತ 6 ತಿಂಗಳ ಅವಧಿಯಲ್ಲಿ ಅತ್ಯುತ್ತಮ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೆಳೆ ಬರುವ ಸಾಧ್ಯತೆಯಿದೆ. ಈ ದಿಸೆಯಲ್ಲಿ ರೈತರಿಗೆ ನೆರವಾಗುವಂತೆ ಮತ್ತು ಈ ಹಿಂದಿನ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಬಾಕಿ ಉಳಿದ ಕುಟುಂಬಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಬಗ್ಗೆ ಸೂಕ್ತ ಅಂಕಿಅಂಶಗಳ ದಾಖಲೀಕರಣಗೊಳಿಸಬೇಕು. ಯಾವುದೇ ಪರಿಸ್ಥಿಯಲ್ಲಿ ಅವ್ಯವಹಾರಕ್ಕೆ ಅವಕಾಶ ನೀಡಬಾರದು. ಅದರಂತೆ ಕೋವಿಡ್-19 ಹಿನ್ನೆಲೆ ಯಾವುದೇ ಸಾಧನ ಸಲಕರಣೆ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಕಂದಾಯ, ಪೊಲೀಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ ಅತ್ಯವಶ್ಯಕ ಇಲಾಖೆಗಳ ಅಧಿಕಾರಿಗಳು ಅತ್ಯುತ್ತಮ ಸೇವೆ ಸಲ್ಲಿಸಿರುವುದಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ (ನಡಹಳ್ಳಿ) ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿವಿಧ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಶಾಸಕ ರಾಜುಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್, ಪ್ರಕೃತಿ ವಿಕೋಪ ನಿರ್ವಹಣಾ ಆಯುಕ್ತ ಮನೋಜ್ ಕುಮಾರ, ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.