ವಿಜಯಪುರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿ ಕುಟುಂಬಸ್ಥರ ಮೇಲೆ ಗೆದ್ದ ಅಭ್ಯರ್ಥಿಯ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಜಿಲ್ಲೆಯ ಚಡಚಣ ತಾಲೂಕಿನ ಡುಮಕನಾಳ ಗ್ರಾಮದಲ್ಲಿ ಕೇಳಿಬಂದಿದೆ.
ಪರಾಜಿತ ಅಭ್ಯರ್ಥಿ ಶಿವಪ್ಪ ಕನಾಳ ಹಾಗೂ ಅವರ ಕುಟುಂಬಸ್ಥರಾದ ರಾಯಪ್ಪ ಕನಾಳ, ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ, ಭೀಮಕ್ಕ ಕನಾಳ ಮೇಲೆ ಹಲ್ಲೆ ಮಾಡಲಾಗಿದೆ. ನಮ್ಮ ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಗೆದ್ದ ಅಭ್ಯರ್ಥಿಯ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಶಿವಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿವಪ್ಪ ಕನಾಳನವರು ನಂದರಗಿ ಗ್ರಾಮ ಪಂಚಾಯತಿಯ 2ನೇ ವಾರ್ಡ್ಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಚಂದ್ರಕಾಂತ ನಂದಗೊಂಡ ಜಯಭೇರಿ ಬಾರಿಸಿದ್ದಾರೆ. ಚಂದ್ರಕಾಂತ ನಂದಗೊಂಡ ಬೆಂಗಲಿಗರಾದ ಅಪ್ಪುಗೌಡ ಪಾಟೀಲ್, ಲಕ್ಷ್ಮಣ ಮುಂತಾದವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಗಾಯಾಳುಗಳನ್ನು ಚಡಚಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.