ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉದ್ಯಾನ ಪ್ರದೇಶಕ್ಕೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಔಷಧ ಸಸ್ಯಗಳು ಸಂಪೂರ್ಣ ನಾಶವಾದ ಘಟನೆ
ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಪೊಲೀಸ್ ಠಾಣೆ ಎದುರಿಗಿನ ಗಾರ್ಡನ್ ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಅರಣ್ಯ ಇಲಾಖೆಗೆ ಸೇರಿದ 90 ಎಕರೆಯಷ್ಟಿರುವ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಗೆ ಸೇರಿದ ಗಾರ್ಡನ್ ಹಾಗೂ ಇತರ ಪ್ರದೇಶದಲ್ಲಿದ್ದ ಗಿಡ, ಸಸ್ಯಗಳು ಬೆಂಕಿಗಾಹುತಿ ಯಾಗಿವೆ.
ಔಷಧ ಸಸ್ಯಗಳು, ತರಹೇವಾರಿ ಗಿಡಗಳು ಸುಟ್ಟು ಭಸ್ಮವಾಗಿವೆ. ಕಳೆದ 10 ವರ್ಷಗಳಿಂದ ಗಿಡಗಳನ್ನು ಬೆಳೆಸಿದ್ದ ಅರಣ್ಯ ಇಲಾಖೆಗೆ ಮಾಡಿದ ಶ್ರಮ ವ್ಯರ್ಥವಾದಂತಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಬೆಂಕಿ ನಂದಿಸುವ ವಾಹನ ಆಗಮಿಸಿದರು ಸಹ ಬೆಂಕಿ ಹತೋಟಿಗೆ ಇನ್ನೂ ಬಂದಿಲ್ಲ. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಗ್ನಿಶಾಮಕದ ಸಿಬ್ಬಂದಿ ಬೆಳಗ್ಗೆ ಮತ್ತೆ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.