ವಿಜಯಪುರ: ಲಂಚ ಸ್ವೀಕರಿಸುತ್ತಿದ್ದ ವೇಳೆ ನೀರು ಸರಬರಾಜು ಇಲಾಖೆ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ ನಗರದ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ನಂಬರ್ 2 ಸಬ್ ಡಿವಿಜನ್ ಕಚೇರಿಯ ಎಇಇ ವಿ.ಜಿ ವಸ್ತ್ರದ ಎಸಿಬಿ ಬಲೆಗೆ ಬಿದ್ದವರು.
ಇವರು ತಮ್ಮದೇ ಇಲಾಖೆಯ ಸಹಾಯಕ ಇಂಜಿನಿಯರ್ ಅಜೀತ್ ಚೌಗಲೆ ಎಂಬುವವರಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ವರ್ಗಾವಣೆಯಾದ ಅಜೀತ್ ಸೇವಾ ಪುಸ್ತಕ ಕಳುಹಿಸಿ ಕೊಡಲು ಲಂಚದ ಬೇಡಿಕೆಯನ್ನು ವಸ್ತ್ರದ ಇಟ್ಟಿದ್ದರಂತೆ. ಈ ಹಿನ್ನೆಲೆಯಲ್ಲಿ ಎಸಿಬಿಗೆ ಅಜೀತ್ ದೂರು ನೀಡಿದ್ದರು.
ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಎಸ್ ಆರ್ ಗಣಾಚಾರಿ ಹಾಗೂ ಸಚಿನ್ ಚಲವಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಆರೋಪಿ ಎಇಇ ವಸ್ತ್ರದ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ