ವಿಜಯಪುರ: ನಗರದಲ್ಲಿ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣವನ್ನು ಹತ್ಯೆ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಭ್ರೂಣದ ತಾಯಿ, ಆಕೆಯ ಪತಿ ಹಾಗೂ ಇಡೀ ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿದಂಬರ ನಗರ ನಿವಾಸಿ ವಿಜಯಲಕ್ಷ್ಮಿ ಎಂಬ ಗರ್ಭಿಣಿಗೆ ಅದಾಗಲೇ 4 ಹಾಗು 6 ವರ್ಷದ ಎರಡು ಹೆಣ್ಣು ಮಕ್ಕಳಿದ್ದು, ಮತ್ತೆ ಗರ್ಭ ಧರಿಸಿದ್ದಳು. ಆದರೆ, ಮೂರನೆಯದೂ ಹೆಣ್ಣಾಗುವ ಭಯದಲ್ಲಿ ಪತಿ ಅರವಿಂದ ಹಡಪದ ತನ್ನ ಪತ್ನಿಯ ಅಕ್ಕ ಭಾಗೀರಥಿ ಇವರ ಸಹಾಯದಿಂದ ನಗರದ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಜೂನ್ 5 ರಂದು ಪರೀಕ್ಷೆ ಮಾಡಿಸಿದ್ದಾಳೆ. ಆ ವೇಳೆ ಹೆಣ್ಣು ಭ್ರೂಣ ಇರುವುದು ತಿಳಿದಿದ್ದು, ಭ್ರೂಣವನ್ನು ತೆಗೆಸುವ ಕೃತ್ಯಕ್ಕೆ ಮುಂದಾಗಿದ್ದಾರೆ.
ಸ್ನೇಹಿತನ ಸಹಾಯದಿಂದ ಕೃತ್ಯ
ಪತಿ ತನ್ನ ಸ್ನೇಹಿತನೊಬ್ಬನ ಸಹಾಯದಿಂದ ಅಕ್ರಮವಾಗಿ ಗರ್ಭಪಾತ ಮಾಡುವ ಓರ್ವ ವ್ಯಕ್ತಿ, ಓರ್ವ ಮಹಿಳೆಯ ಮಾಹಿತಿ ಪಡೆದಿದ್ದಾನೆ. ಈ ತಂಡ ಗರ್ಭಪಾತ ಮಾಡಲು 25 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದೆ. ಇದಕ್ಕೆ ಅರವಿಂದ ಸಮ್ಮತಿಸಿದ್ದಾನೆ. ಬಳಿಕ ನಗರದ ಗೋಳಗುಮ್ಮಟ ಪೊಲೀಸ್ ಠಾಣೆ ಬಳಿಯ ಮನೆಯೊಂದರಲ್ಲಿ ಜೂ.7 ರಂದು ಗರ್ಭಪಾತ ಮಾಡಿಸಿದ್ದಾರೆ.
ಗರ್ಭಪಾತದ ಬಳಿಕ ಹೆಣ್ಣು ಭ್ರೂಣ ಇರುವುದನ್ನು ತಾಯಿಗೆ ತೋರಿಸಿ ಖಚಿತ ಪಡಿಸಿದ್ದಾರೆ. ಆದರೆ, ಗರ್ಭಪಾತ ಮಾಡಿಸಿದ ಸಂದರ್ಭದಲ್ಲಿ ತಾಯಿಯ ಗರ್ಭದಿಂದ ಭ್ರೂಣದ ಜೊತೆಗೆ ಕರುಳು ಹೊರಗೆ ಬಂದಿದ್ದು, ಮಹಿಳೆ ಜೀವನ್ಮರಣದೊಂದಿಗೆ ಹೋರಾಟ ನಡೆಸಿದ್ದಾಳೆ.
ಸಂತ್ರಸ್ತೆಯನ್ನು ಅರ್ಧ ದಾರಿಗೆ ಬಿಟ್ಟು ಪರಾರಿ
ಇದರಿಂದ ಕಂಗಾಲಾದ ಗರ್ಭಪಾತಕ್ಕೆ ಕರೆತಂದ ವ್ಯಕ್ತಿ, ವಿಜಯಲಕ್ಷ್ಮಿ ಹಾಗೂ ಆಕೆಯ ಸಹೋದರಿ ಭಾಗೀರಥಿಯನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹೈಪರ್ ಮಾರ್ಟ್ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಮಹಿಳೆಯನ್ನು ಡಾ.ಸಾಸನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಜಿಲ್ಲಾ ಪರಿವೀಕ್ಷಣಾ ತಂಡ ಪ್ರಕರಣದ ಬೆನ್ನು ಬಿದ್ದಾಗ ಭ್ರೂಣಲಿಂಗ ಪತ್ತೆ ಕೃತ್ಯ ಎಸಗಿರುವುದು ಖಚಿತವಾಗಿದೆ.
ಕೃತ್ಯದ ಕುರಿತು ಜಿಲ್ಲಾ ಪರಿವೀಕ್ಷಣಾ ಸಮಿತಿ ಅಧ್ಯಕ್ಷೆ ಡಾ.ರಾಜೇಶ್ವರಿ ಗೋಲಗೇರಿ, ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲ್ಕುಮಾರ ತಿಳಿಸಿದ್ದಾರೆ. ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.