ವಿಜಯಪುರ: ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡಿದ್ದ 46 ಸರ್ಕಾರಿ ಪಿಯುಸಿ ಕಾಲೇಜ್ ಆರಂಭಿಸುವಂತೆ ಶಿಕ್ಷಣ ಪ್ರೇಮಿಯೊಬ್ಬ ತನ್ನ ರಕ್ತದಲ್ಲಿ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ, ನಿರ್ದೇಶಕ ಹಾಗೂ ಮುದ್ದೇಬಿಹಾಳ ಶಾಸಕ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಶಿಕ್ಷಣ ಪ್ರೇಮಿ ಹೋರಾಟಗಾರ ವಿಜಯರಂಜನ್ ಜೋಶಿ ತಮ್ಮ ರಕ್ತದಲ್ಲಿ ಪತ್ರ ಬರೆದು ಕೂಡಲೇ ಮಂಜೂರಾಗಿರುವ 46 ಹೊಸ ಸರ್ಕಾರಿ ಪಿಯುಸಿ ಕಾಲೇಜ್ ಆರಂಭಿಸುವಂತೆ ಆಗ್ರಹಿಸಿದ್ದಾನೆ.
ವಿಜಯರಂಜನ್ ಜೋಶಿ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದವರು. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 46ಹೊಸ ಪಿಯು ಕಾಲೇಜುಗಳಿಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಶೈಕ್ಷಣಿಕ ವರ್ಷದ ಪ್ರವೇಶಾತಿ ಮುಗಿಯುತ್ತಾ ಬಂದಿದ್ದರೂ ಇನ್ನೂ ಹೊಸ ಪಿಯು ಕಾಲೇಜು ಆರಂಭಗೊಂಡಿಲ್ಲ ಎಂದು ನೊಂದು ತನ್ನ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಶೀಘ್ರ ಹೊಸ ಪಿಯು ಕಾಲೇಜಿನಲ್ಲಿ ಪ್ರವೇಶಾತಿಗೆ ಅವಕಾಶ ಕೊಡಬೇಕು. ಇದರಿಂದ 15ರಿಂದ 20 ಸಾವಿರ ಬಡವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುದ್ದೇಬಿಹಾಳ ಶಾಸಕ ಸಿಎಸ್ ನಾಡಗೌಡರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ್ದಾರೆ. ನಾಲತವಾಡ ಪಟ್ಟಣ ಸೇರಿದಂತೆ ರಾಜ್ಯಾದ್ಯಂತ 46 ಹೊಸ ಪದವಿಪೂರ್ವ ಕಾಲೇಜಿಗೆ ಅನುಮೋದನೆ ಕೊಟ್ಟಿದ್ದ ಬಿಜೆಪಿ ಸರ್ಕಾರ ಈಗ ಅಧಿಕಾರ ಕಳೆದುಕೊಂಡಿದೆ.
ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಆದರೆ, ಇಲ್ಲಿಯವರೆಗೆ ಹೊಸ ಪಿಯು ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಶಿಕ್ಷಣ ಸಚಿವರಾಗಲಿ, ಸಿಎಂ ಆಗಲಿ ಚಕಾರ ಎತ್ತಿಲ್ಲ. ಹಿಂದಿನ ಸರ್ಕಾರದ ಯೋಜನೆ ಮೊಟಕುಗೊಳಿಸುವ ಬದಲು ಅವುಗಳನ್ನು ಜಾರಿಗೊಳಿಸುವಂತೆ 46 ಪಿಯುಸಿ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿಗೂ ಪತ್ರ ಬರೆದಿದ್ದ ನಿರಂಜನ್ : ಈ ಹಿಂದೆಯೂ ನಿರಂಜನ್ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಪಿಯು ಕಾಲೇಜು ಆರಂಭಿಸುವಂತೆ ಪ್ರಧಾನಿ ಮೋದಿ ಹಾಗೂ ಹಿಂದಿನ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಶಿಕ್ಷಣ ಪ್ರೇಮಿಯ ಬೇಡಿಕೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಒಪ್ಪಿಗೆ ಸೂಚಿಸಿ, ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ತೋರಿಸಿತ್ತು.
ಪಟ್ಟಣದಲ್ಲಿ ಪದವಿಪೂರ್ವ ಕಾಲೇಜು ಆರಂಭಕ್ಕೆ ಆದೇಶ ಹೊರಡಿಸಿ, ಇದರ ಜತೆಗೆ ರಾಜ್ಯದಲ್ಲಿ ಒಟ್ಟು 46 ಪದವಿ ಪೂರ್ವ ಕಾಲೇಜುಗಳ ಮಂಜೂರಾತಿಗೆ ಹಿಂದಿನ ಸರ್ಕಾರ ಆದೇಶ ನೀಡಿತ್ತು. ಇನ್ನು ನಿರಂಜನ್ 2017ರಿಂದಲೂ ಶಾಲೆ, ಪಿಯು ಹಾಗೂ ಡಿಗ್ರಿ ಕಾಲೇಜು ಸ್ಥಾಪನೆಗಾಗಿ ರಾಜಕೀಯ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಪತ್ರ ಬರೆಯುತ್ತಲೆ ಬಂದಿದ್ದಾರೆ.
ನಿರಂಜನ್ ಜೋಶಿ ರಕ್ತ ಪತ್ರ ವ್ಯವಹಾರ: 2017ರಲ್ಲಿ ಹೈಸ್ಕೂಲ್, ಪಿಯು ಹಾಗೂ ಡಿಗ್ರಿ ಕಾಲೇಜು ಸ್ಥಾಪನೆಗಾಗಿ ಅಂದಿನ ಶಾಸಕ ಸಿ.ಎಸ್ ನಾಡಗೌಡ, ಜಿಲ್ಲಾಧಿಕಾರಿ, ಡಿಡಿಪಿಯುಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ, ಅದು ಯಾವುದು ಪ್ರಯೋಜನವಾಗಿರಲಿಲ್ಲ.
ನಂತರ 2018ರಲ್ಲಿ ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ವಿನಂತಿಸಿದ್ದರು. ಪಿಯು ಕಾಲೇಜು ಆರಂಭಿಸುವಂತೆ ಕೋರಿ ಪ್ರಧಾನಿಗೆ ರಕ್ತದಲ್ಲಿ 10 ಪುಟಗಳ ಪತ್ರ ಬರೆದಿದ್ದರು. ಆರು ತಿಂಗಳ ಬಳಿಕ ಪ್ರಧಾನಿ ಕಚೇರಿಯಿಂದ ಕಾಲೇಜು ಆರಂಭಿಸುವುದಾಗಿ ಭರವಸೆಯ ಪತ್ರ ಬಂದು, ಮುಖ್ಯಮಂತ್ರಿ ಕಚೇರಿಯಿಂದ ಪರಿಶೀಲಿಸಲಾಗುವುದು ಎಂಬ ಉತ್ತರ ಸಿಕ್ಕಿತ್ತು. ನಿರಂಜನ್ ಅವರು ಖಾಸಗಿ ಶಾಲೆಗಳ ಹೆಚ್ಚಿನ ಡೊನೇಷನ್ ಹಾವಳಿ ತಪ್ಪಿಸಿ, ಬಡ ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ರಕ್ತ ಪತ್ರ ವ್ಯವಹಾರ ಶುರು ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ.. ಕೊನೆಗೂ ಈಡೇರಿತು ವಿಜಯಪುರದ ಶಿಕ್ಷಣ ಪ್ರೇಮಿಯ ಬೇಡಿಕೆ