ಮುದ್ದೇಬಿಹಾಳ: ನಗರದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ದೇಶಿ ತಳಿಗಳ ಜೊತೆಗೆ ವಿದೇಶಿ ತಳಿಯ ಶ್ವಾನಗಳು ಪಾಲ್ಗೊಂಡು ಶ್ವಾನಪ್ರಿಯರ ಗಮನ ಸೆಳೆದವು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಪಶು ಸಂಗೋಪನಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಶ್ವಾನಗಳ ಪ್ರದರ್ಶನ, ರೇಬಿಸ್ ಲಸಿಕೆ ಹಾಕುವ ಅಭಿಯಾನ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಶ್ವಾನಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಮೇಳದಲ್ಲಿ ದೇಶಿ ತಳಿಯ ಶ್ವಾನಗಳ ಜೊತೆಗೆ ವಿದೇಶಿ ತಳಿಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ವಿಜಯಪುರದಿಂದ ಆಗಮಿಸಿದ್ದ ಸಂತೋಷ ಚವ್ಹಾಣ್ ಅವರ ಗ್ರೇಟಡೆನ್ ಶ್ವಾನ ಹಾಗೂ ಚಿತ್ರದುರ್ಗದಿಂದ ಆಗಮಿಸಿದ್ದ ಸತ್ಯಪ್ರಸಾದ ಅವರ ಡಾಬರ್‌ಮನ್ ಶ್ವಾನ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರೆ ಲೋಕಾಪೂರದಿಂದ ಆಗಮಿಸಿದ್ದ ವೆಂಕಪ್ಪ ನಾವಲಗಿ ಅವರ ಮುಧೋಳ ಹೌಂಡ್ ಎರಡನೇ ಬಹುಮಾನಕ್ಕೆ ಪಾತ್ರವಾಯಿತು. ಮುದ್ದೇಬಿಹಾಳದ ವಾಮನರಾವ್ ಲಮಾಣಿ ಅವರ ಪೊಮೇರಿಯನ್ ಶ್ವಾನದ ಮರಿ ಹಾಗೂ ಹೊಸಪೇಟೆಯ ಸೈಬರೀಯನ್ ಹಸ್ಕಿ ಮೂರನೇ ಬಹುಮಾನವನ್ನು ಮುಡಿಗೇರಿಸಿಕೊಂಡವು.
ಭಾಗಿಯಾಗಿದ್ದ ತಳಿಗಳು:
ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಗಳಾದ ಮುಧೋಳ ಹೌಂಡ್, ಪಾಸ್ಮಿ ಬ್ರೀಡ್ಸ್, ಪಂಜಾಬ ಹೌಂಡ್, ಗ್ರೇ ಹಾಂಡ್, ಸೈಬರಿಯನ್ ಹಸ್ಕಿ, ಡಾಬರಮನ್, ಪೊಮೆರಿಯನ್, ಗ್ರೇಟೇನ್, ರಾಟವೀಲರ್, ಲ್ಯಾಬ್ರಡಾರ್, ಮಿನಿಎಚ್ ಫಾರ್ಮ್, ಜರ್ಮನ್ ಶೆಪರ್ಡ್, ಡ್ಯಾಶೌಟ್, ಬಾಕ್ಸರ್ ಮೊದಲಾದ ತಳಿಯ ಶ್ವಾನಗಳು ಪಾಲ್ಗೊಂಡಿದ್ದವು.
ಗಮನ ಸೆಳೆದ ದೇಶಿ ತಳಿ ಮುಧೋಳ ಹೌಂಡ್:
ಇತ್ತೀಚೆಗಷ್ಟೇ ರಾಷ್ಟ್ರದ ರಕ್ಷಣಾ ಪಡೆಗೆ ಸೇರಿರುವ ಮುಧೋಳ ಹೌಂಡ್ ತಳಿಯ ನಾಯಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಈ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಮುಧೋಳದ ಶ್ವಾನಗಳು ಸೇರಿದಂತೆ ಒಟ್ಟು 18 ತಳಿಯ 200 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಕೊಲ್ಹಾಪುರ, ಚಿತ್ರದುರ್ಗ, ಹೊಸಪೇಟೆ, ದಾವಣಗೆರೆ ಕಡೆಗಳಿಂದ ಶ್ವಾನಪ್ರಿಯರು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪಶು ಇಲಾಖೆಯ ಉಪ ನಿರ್ದೇಶಕ ಪ್ರಾಣೇಶ ಜಹಾಗೀರದಾರ, ಪ್ರಭಾರ ಅಧಿಕಾರಿ ಶಿವಾನಂದ ಮೇಟಿ, ಡಾ.ರಮೇಶ ರಾಠೋಡ, ಡಾ.ಸತೀಶ ಮುಂಡಾಸ, ಡಾ.ಸುರೇಶ ಭಜಂತ್ರಿ ಮೇಳದ ನೇತೃತ್ವ ವಹಿಸಿದ್ದರು.