ಮುದ್ದೇಬಿಹಾಳ (ವಿಜಯಪುರ): ಮತಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಸೋಂಕು ನಿಯಂತ್ರಣದ ಸಲುವಾಗಿ ಶಾಸಕರ ಅನುದಾನದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಗತ್ಯ ಆರೋಗ್ಯ ಸಾಮಗ್ರಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಎ. ಎಸ್.ಪಾಟೀಲ್ ನಡಹಳ್ಳಿ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ಪ್ರಮುಖ ಆಸ್ಪತ್ರೆಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್, ಔಷಧಿ ಸಾಮಗ್ರಿ, ಆಕ್ಸಿ ಮೀಟರ್, ಫೇಸ್ ಶಿಲ್ಡ್, ಮೂರು ಆಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.
ಮುದ್ದೇಬಿಹಾಳ, ತಾಳಿಕೋಟಿ ಸಾರಿಗೆ ಘಟಕದಲ್ಲಿ ಹಳೆಯ ಬಸ್ಗಳಲ್ಲಿ ಬೆಡ್ಗಳು ಹಾಕಿ ಆಕ್ಸಿಜನ್ ಸಿಲಿಂಡರ್ ಅಳವಡಿಸಿ ಸಂಚಾರಿ ಆಕ್ಸಿಜನ್ ಆಸ್ಪತ್ರೆಯನ್ನಾಗಿ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದೆ. ಇನ್ನುಳಿದಂತೆ ಮುದ್ದೇಬಿಹಾಳ ತಾಳಿಕೋಟೆ, ನಾಲತವಾಡ ಹಾಗೂ ಪ್ರಮುಖ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೆಡ್ಗಳ ಸಂಖ್ಯೆ ಹೆಚ್ಚಿಸಲು ವೈದ್ಯರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ನಿಲಯ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ, ತಾಳಿಕೋಟಿಯ ವಸತಿ ನಿಲಯಗಳು ಕೋವಿಡ್ ಕೇರ್ ಸೆಂಟರ್ಗಳನ್ನಾಗಿ ಬದಲಾಯಿಸಲಾಗುವುದು. ಮುಂಜಾಗೃತಾ ಕ್ರಮವಾಗಿ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ ಎಂದು ನಡಹಳ್ಳಿ ತಿಳಿಸಿದ್ದಾರೆ.