ಮುದ್ದೇಬಿಹಾಳ: ಪಟ್ಟಣದ ಶ್ರೀ ಸಾಯಿ ಫ್ಯಾಮಿಲಿ ಮಾರ್ಟ್ ಮುಖ್ಯಸ್ಥ ಬಸನಗೌಡ ಪಾಟೀಲ (ಸರೂರ) ಸಸಿಗಳನ್ನು ವಿತರಿಸುವ ಮೂಲಕ ಇಂದು ತಮ್ಮ ಜನ್ಮ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು.
ಸಾರ್ವಜನಿಕರಿಗೆ, ತಮ್ಮ ಮಾರ್ಟ್ಗೆ ಆಗಮಿಸಿದ ಗ್ರಾಹಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಪ್ರೇಮ ಮೆರೆದರು. ಹಲವು ಪರಿಸರ ಪರ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿರುವ ಬಸನಗೌಡ ಪಾಟೀಲ, ತಮ್ಮ ವಿವಾಹದ ಸಂದರ್ಭದಲ್ಲಿ 500 ಸಸಿಗಳನ್ನು ವಿತರಿಸಿದ್ದರು. ಪುತ್ರನ ಜನ್ಮದಿನದ ಸಮಯದಲ್ಲಿ ಪಕ್ಷಿಗಳಿಗೆ ನೀರು ಕುಡಿಯುವ ಮಣ್ಣಿನ ಪಾತ್ರೆ, ಆಹಾರ ಧಾನ್ಯಗಳನ್ನು ವಿತರಿಸಿದ್ದರು. ಇಂದು ತಮ್ಮ ಜನ್ಮ ದಿನದ ನಿಮಿತ್ತ ಸಸಿಗಳನ್ನು ವಿತರಿಸಿದರು.
ಸಸಿಗಳನ್ನು ವಿತರಿಸಿ ಮಾತನಾಡಿದ ಬಸನಗೌಡ ಪಾಟೀಲ, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿ ಇದೆ. ಅವರು ಗಿಡಗಳು ಸಿಕ್ಕರೆ ತಮ್ಮ ಮನೆಯಂಗಳದಲ್ಲಿ ಹೊಲಗಳಲ್ಲಿ ನೆಡುವ ಕೆಲಸ ಮಾಡುತ್ತಾರೆ. ಅದಕ್ಕೆಂದೇ ಅರಣ್ಯ ಇಲಾಖೆಯ ಕೇಸಾಪೂರದ ನರ್ಸರಿ ಫಾರ್ಮ್ ನಲ್ 300 ಸಸಿಗಳನ್ನು ತಂದು ವಿತರಿಸಿದ್ದೇನೆ ಎಂದು ತಿಳಿಸಿದರು.
ಈ ಸಸಿ ವಿತರಣೆ ಮಾಡಲು ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಹಾಗೂ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ ನೆರವು ನೀಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಪದಾಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.