ವಿಜಯಪುರ: ಭೀಮಾ ನದಿಯಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಉಂಟಾಗಿದ್ದು, ಇಂಡಿ ತಾಲೂಕಿನ 27 ಗ್ರಾಮಗಳು ಜಲಾವೃತವಾಗಿವೆ. ಶನಿವಾರ ಜಿಲ್ಲೆಯಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸಲು ಅನುಕೂಲವಾಗಿದೆ.
ಜಿಲ್ಲೆಯಲ್ಲಿ 2 ಎನ್.ಡಿ.ಆರ್.ಎಫ್ ತಂಡಗಳು ಸಿಂದಗಿ ತಾಲೂಕಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಬೆಳಗಾವಿಯ ಮರಾಠಾ ಲೈಫ್ ಇನ್ಫೆಂಟರಿಯ ಪ್ರವಾಹ ರೆಸ್ಕ್ಯೂ ತಂಡವು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಸರ್ವೆ ಕಾರ್ಯದಲ್ಲಿ ತೊಡಗಿದ್ದು, ಒಟ್ಟಿನಲ್ಲಿ ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸುವಲ್ಲಿ ಸರ್ವಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಚಡಚಣ ತಾಲೂಕಿನ ವಿವಿಧ ಏಳು ಗ್ರಾಮಗಳಲ್ಲಿ ಒಟ್ಟು 3,121 ಮನೆಗಳಿದ್ದು, ಆ ಪೈಕಿ 189 ಮನೆಗಳು ಜಲಾವೃತಗೊಂಡಿವೆ. 1,002 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 121 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.
ಇಂಡಿ ತಾಲೂಕಿನ ವಿವಿಧ 12 ಗ್ರಾಮಗಳಲ್ಲಿ ಒಟ್ಟು 6,434 ಮನೆಗಳಿದ್ದು, ಆ ಪೈಕಿ 1,790 ಮನೆಗಳು ಜಲಾವೃತಗೊಂಡಿವೆ. ಅಲ್ಲಿ 8,952 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟು 515 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.
ಸಿಂದಗಿ ತಾಲೂಕಿನ ವಿವಿಧ 8 ಗ್ರಾಮಗಳಲ್ಲಿ ಒಟ್ಟು 426 ಮನೆಗಳು ಜಲಾವೃತಗೊಂಡಿವೆ. ಅಲ್ಲಿನ 1,421 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 880 ಜನರನ್ನು ರಕ್ಷಣಾ ತಂಡದಿಂದ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯ ಚಡಚಣ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಒಟ್ಟು 18 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 460 ಕುಟುಂಬಗಳಿದ್ದು, ಅಲ್ಲಿ 1,861 ಜನರಿದ್ದಾರೆ ಎಂದು ಅವರು ತಿಳಿಸಿದ್ದಾರೆ.