ವಿಜಯಪುರ: ಇನ್ನೇನು 2020 ಮುಗಿದು ನಾವೆಲ್ಲಾ 2021ರ ಹೊಸ್ತಿಲಲ್ಲಿದ್ದೇವೆ. ಈ 2020ರಲ್ಲಿ ಜಿಲ್ಲೆಯಲ್ಲಿ ಏನೆಲ್ಲಾ ನಡೆದಿದೆ ಅಂತ ಒಮ್ಮೆ ತಿರುಗಿ ನೋಡಿದ್ರೆ ಈ ವರ್ಷ ಸಿಹಿಗಿಂತ ಕಹಿ ಘಟನೆಗಳೇ ಹೆಚ್ಚು ಅನ್ನೋದು ತಿಳಿಯುತ್ತೆ.
ಹೌದು, ಒಂದೆಡೆ ಜಿಲ್ಲೆಯಲ್ಲಿ ಕೊರೊನಾಗೆ ಅನೇಕ ಮಂದಿ ಸಾವನ್ನಪ್ಪಿದ್ರೆ, ಮತ್ತೊಂದು ಕಡೆ ಭೀಮಾತೀರದಲ್ಲಿ ಮತ್ತೊಮ್ಮೆ ಗುಂಡುಗಳು ಸದ್ದು ಮಾಡಿದ್ದವು. ಇದರ ಜೊತೆಗೆ ಪ್ರವಾಹ ರೈತರ ಬದುಕನ್ನು ದುಸ್ತರವಾಗುವಂತೆ ಮಾಡಿತ್ತು.
ಕೋವಿಡ್-19 ದೇಶಕ್ಕೆ ಕಾಲಿಟ್ಟ ಮೇಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಿತು. ಮೊದಮೊದಲು ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿರಲಿಲ್ಲ. ಕೆಲ ದಿನಗಳ ನಂತರ 67 ವರ್ಷದ ವೃದ್ಧೆಯೊಬ್ಬರಿಗೆ ಮೊದಲು ಕೊರೊನಾ ಕಾಣಿಸಿಕೊಂಡಿತು ಇದರಿಂದಾಗಿ ನಗರದ ಚಪ್ಪರಬಂದ್ ಗಲ್ಲಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು.
ವೃದ್ಧೆಯಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಹೋದವು. ಮೊದಲು ಜಿಲ್ಲಾಡಳಿತ ಎಚ್ಚರಿಕೆ ಹೆಜ್ಜೆ ಇಟ್ಟಿತ್ತು. ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಂತೆ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬರಲಿಲ್ಲ. ಲಾಕ್ಡೌನ್ ಹಿಂದಕ್ಕೆ ಪಡೆಯುತ್ತಿದ್ದಂತೆ ದಿನಕ್ಕೆ 80-100 ಪ್ರಕರಣಗಳು ದಾಖಲಾಗುತ್ತಾ ಬಂದವು. ಸದ್ಯ ಒಟ್ಟು 14,182 ಜನ ಕೊರೊನಾದಿಂದ ಗುಣಮುಖರಾದ್ರೆ 204 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನೇನು ಕೊರೊನಾ ಹತೋಟಿಗೆ ಬಂತು ಎನ್ನುವಾಗಲೇ ಅಕ್ಟೋಬರ್ನಲ್ಲಿ ಭೀಮಾ ಹಾಗೂ ಡೋಣಿ ನದಿಗೆ ಪ್ರವಾಹ ಬಂದು 2 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಯಿತು. ಭೀಮಾ ನದಿಯ ಎಂಟು ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಇದರಿಂದ ಹಲವರು ಪ್ರಾಣ ಕಳೆದುಕೊಂಡರು.
ಅದರ ಬೆನ್ನಲ್ಲಿಯೇ ನವೆಂಬರ್ 2ರಂದು ಭೀಮಾತೀರದ ರಕ್ತ ಸಿಕ್ತ ಇತಿಹಾಸಕ್ಕೆ ಹೊಸ ತಿರುವು ದೊರೆಯಿತು. ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಹಾಡುಹಗಲೇ ಕನ್ನಾಳ ಕ್ರಾಸ್ ಬಳಿ ಗುಂಡಿನ ದಾಳಿ ನಡೆಯಿತು. ಇದರಲ್ಲಿ ಮಹಾದೇವ ಸಾಹುಕಾರ ಕೂದಲೆಳೆಯಲ್ಲಿ ಬಚಾವಾದ್ರೆ, ಅವರ ಅಂಗರಕ್ಷಕ ಹಾಗೂ ಚಾಲಕ ಪ್ರಾಣ ಕಳೆದುಕೊಂಡರು.. ಈ ಪ್ರಕರಣದ ತನಿಖೆ ನಡೀತಿದ್ದು, ಮುಖ್ಯ ಆರೋಪಿ ಮಡಿವಾಳಯ್ಯ ಸೇರಿದಂತೆ 35 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದಾದ್ಮೇಲೆ ವಿಜಯಪುರ ನಗರದಲ್ಲಿ ಮತ್ತೊಂದು ಶೂಟೌಟ್ ನಡೆದು ಹೋಯಿತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರೆಲ್ಲಾ ಇನ್ನೂ ಮೀಸೆ ಚಿಗುರದ ಹುಡುಗರು ಅನ್ನೋ ವಿಚಾರ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಅವರ ಕೈಗೆ ಕಂಟ್ರಿ ಪಿಸ್ತೂಲ್ಗಳು ದೊರೆತಿದ್ದು ಹೇಗೆ ಎಂಬ ಬಗ್ಗೆ ಇನ್ನೂ ಪೊಲೀಸರು ತನಿಖೆ ಮಾಡ್ತಿದ್ದಾರೆ.
ವರ್ಷದ ಕೊನೆಯಲ್ಲಿ ಜಿಲ್ಲೆಯ 199 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದಿದೆ. ಗೆದ್ದವರು ಬೀಗಿದರೆ, ಸೋತವರಿಗೆ ಅವರ ಬೆಂಬಲಿಗರು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಕೊರೊನಾ ಎರಡನೇ ಅಲೆಯ ಎಚ್ಚರಿಕೆ ಗಂಟೆ ಬಾರಿಸಿದೆ. ಮತ್ತೆ ಹೊಸ ವರ್ಷ ಕೊರೊನಾ ಮಾಯವಾದರೆ ಸಾಕು ಎಂದು ಜಿಲ್ಲೆಯ ಜನತೆ ಕಾಯುತ್ತಿದ್ದಾರೆ.