ವಿಜಯಪುರ: ಉದ್ಯೋಗ ಅರಸಿ ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ಹೋಗಿದ್ದವರು ಗುಂಪು ಗುಂಪಾಗಿ ಹಿಂತಿರುತ್ತಲೇ ಇದ್ದು, ಇಂದೂ ಕೂಡ 147 ಮಂದಿ ಮುಂಬೈ ನಿಂದ ರೈಲಿನ ಮೂಲಕ ವಿಜಯಪುರಕ್ಕೆ ಬಂದಿಳಿದಿದ್ದಾರೆ.
ಹೀಗೆ ರಾಜ್ಯಕ್ಕೆ ಮರಳಿರುವ ಇವರನ್ನು ನಗರದ ಹೊರ ಭಾಗದಲ್ಲಿರುವ ವಸತಿ ನಿಲಯದಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿನ ವಸತಿ ಶಾಲೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ.
ಇಂದು ವಿಜಯಪುರಕ್ಕೆ ಆಗಮಿಸಿದ ಕಾರ್ಮಿಕರನ್ನು ಮೊದಲು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಅವರನ್ನು ಕೆಎಸ್ ಆರ್ಟಿಸಿ ಬಸ್ ಮೂಲಕ ನಗರ ಸೇರಿದಂತೆ ವಿವಿಧ ತಾಲೂಕು ಕೇಂದ್ರದಲ್ಲಿ ಸ್ಥಾಪಿಸಿರುವ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಯಿತು.
ನಿನ್ನೆಯಿಂದ ಆರಂಭವಾಗಿರುವ ಮುಂಬೈ - ಗದಗ ರೈಲಿನಲ್ಲಿ ಮೊದಲನೇ ದಿನ 212 ಕಾರ್ಮಿಕರು ಆಗಮಿಸಿದ್ದರು. ಇಂದು 147 ಮಂದಿ ಮುಂಬೈನಿಂದ ವಿಜಯಪುರಕ್ಕೆ ಆಗಮಿಸಿದ್ದಾರೆ. ಮುಂಬೈ - ಗದಗ ರೈಲು ವಾರದ ಏಳು ದಿನ ಸಂಚರಿಸುತ್ತಿದ್ದು, ನಾಳೆಯೂ ಸಾಕಷ್ಟು ಕಾರ್ಮಿಕರು ಬರುವ ನಿರೀಕ್ಷೆ ಇದೆ.