ವಿಜಯಪುರ: ಮಹಾರಾಷ್ಟ್ರದ ಪುಣೆಯಿಂದ ನಗರಕ್ಕೆ ಆಗಮಿಸಿದ 13 ಜನ ಯುವಕರಿಗೆ ಜಿಲ್ಲಾಡಳಿತ ವೈದ್ಯಕೀಯ ತಪಾಸಣೆ ನಡೆಸಿ ಆಶ್ರಯ ನೀಡಿದೆ.
ಪುಣೆಯಿಂದ ಆಗಮಿಸಿದ 13 ಜನ ಯುವಕರು: ವೈದ್ಯಕೀಯ ತಪಾಸಣೆ ನಡೆಸಿದ ಜಿಲ್ಲಾಡಳಿತ ಕೃಷಿ ತರಬೇತಿಗಾಗಿ ಪುಣೆಗೆ ತೆರಳಿದ್ದ ಉಡುಪಿ, ಮಂಗಳೂರು ಭಾಗದ 13 ಯುವಕರು ಖಾಸಗಿ ವಾಹನದ ಮೂಲಕ ವಿಜಯಪುರ ಗಡಿ ತಲುಪಿದ್ದರು. ಬಳಿಕ ತಮ್ಮ ಊರಿಗೆ ತೆರಳಲು ಯಾವುದೇ ವಾಹನ ಸೌಲಭ್ಯವಿಲ್ಲದೆ ಕಾಲ್ನಡಿಗೆಯಲ್ಲಿ ವಿಜಯಪುರ ನಗರಕ್ಕೆ ಆಗಮಿಸಿದ್ದಾರೆ. ಯುವಕರು ಪುಣೆಯಿಂದ ಬಂದಿರುವ ವಿಷಯವನ್ನು ಸಾರ್ವಜನಕರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆಗ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್ ಸಿಇಒ ಗೋವಿಂದ ರೆಡ್ಡಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಗರಕ್ಕೆ ಬಂದ ಯುವಕರಿಂದ ಮಾಹಿತಿ ಕಲೆಹಾಕಿದ್ದಾರೆ.ತಾವು ಕೃಷಿ ತರಬೇತಿಗೆ ಮಹಾರಾಷ್ಟ್ರದ ಪುಣೆಗೆ ತೆರಳಿದ್ದೆವು. ಲಾಕ್ಡೌನ್ ಹಿನ್ನೆಲೆ ಊಟ, ವಸತಿ ಸಿಗದ ಕಾರಣ ತಮ್ಮ ಊರಿಗೆ ಪ್ರಯಾಣ ಬೆಳೆಸಿರೋದಾಗಿ ಯುವಕರು ಮಾಹಿತಿ ನೀಡಿದ್ದಾರೆ. ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯುವಕರ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಯಾರೂ ಕೊರೊನಾ ಶಂಕಿತರು ಎಂದು ಕಂಡು ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯುವಕರಿಗೆ ನಗರದಲ್ಲಿ ಇರುವಂತೆ ಸೂಚನೆ ನೀಡಿದೆ.