ವಿಜಯಪುರ: ಇಂತಹ ಜಲ ಪ್ರಳಯವನ್ನು ನಾನೆಂದೂ ಕಂಡಿರಲಿಲ್ಲ. ಇದರಿಂದಾಗಿ ಜನ-ಜಾನುವಾರು, ಆಸ್ತಿ-ಪಾಸ್ತಿ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹೊಣೆ ಹಾಗೂ ಕರ್ತವ್ಯವಾಗಿದೆ. ನಿರೀಕ್ಷೆಗೆ ಮೀರಿ ಸಂಘ ಸಂಸ್ಥೆಗಳು, ಜನರು ನಮಗೆ ಸಹಕಾರ ನೀಡಿದ್ದಾರೆ. ಜನರಿಗೆ, ಸಂಘ-ಸಂಸ್ಥೆಗಳಿಗೆ ನನ್ನ ಅಭಿನಂದನೆ. ರಾಜ್ಯ ಸರ್ಕಾರ ಈ ಬಾರಿ ನೆರೆ ಸಂತ್ರಸ್ತರಿಗೆ 10 ಸಾವಿರ ಕೊಡಲು ನಿರ್ಧರಿಸಿದೆ. ಸಮೀಕ್ಷೆ ಈಗಾಗಲೇ ಮುಗಿದಿದ್ದು, ನೆರೆ ಸಂತ್ರಸ್ತರ ಅಕೌಂಟ್ಗಳಿಗೆ ಹತ್ತು ಸಾವಿರ ರೂ. ಹಾಕಲಾಗುವುದು ಎಂದರು.
ಇನ್ನು ಮಂತ್ರಿ ಮಂಡಲದ ವಿಸ್ತರಣೆ ಬಳಿಕ ಎಲ್ಲಾ ಸಚಿವರು ಹಲವೆಡೆ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕೇಂದ್ರ ಸರ್ಕಾರದಿಂದ ಮುಂಚೆಯೇ 128 ಕೋಟಿ ಬಿಡುಗಡೆ ಮಾಡಲಾಗಿತ್ತು. 1,028 ಕೋಟಿ ಬರಗಾಲದ ವಿಚಾರದಲ್ಲಿ ನಿನ್ನೆ ಬಿಡುಗಡೆ ಮಾಡಿದೆ. ಸದ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಅಕೌಂಟ್ಗೆ 1 ಕೋಟಿ ನೀಡಲಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚಿಗೆ ಬಿಡುಗಡೆಯಾಗಿರಬಹುದು. ಆದರೆ, ಈಗ ಸದ್ಯ ಇನ್ನೂ ಸಮೀಕ್ಷೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.