ವಿಜಯಪುರ: ಕೊರೊನಾ ಮಹಾಮಾರಿಯಿಂದ ಕುಂಠಿತಗೊಂಡಿರುವ ಶೈಕ್ಷಣಿಕ ವಲಯವನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಉದ್ದೇಶದಿಂದ ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆ ಬಹಳ ಮಹತ್ವ ಪಡೆದುಕೊಂಡಿದ್ದು, ಈ ಹಿನ್ನೆಲೆ ವಿಜಯಪುರ ಶಿಕ್ಷಣ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಹೌದು, ಕೊರೊನಾದಿಂದ ಪೂರ್ಣ ಪಠ್ಯವನ್ನು ಮುಗಿಸದಿರುವ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಪರೀಕ್ಷೆಗೆ ಹಿಂಜರಿಯಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಿದೆ. 100 ದಿನಗಳ ಪಾಠವನ್ನು ವಿನೂತನವಾಗಿ ನಡೆಸಲು ಸಿದ್ಧತೆ ನಡೆಸಿದೆ. ಜಿಲ್ಲೆಯ ಎಲ್ಲಾ 557 ಸರ್ಕಾರಿ ಫ್ರೌಢಶಾಲೆ ಹಾಗೂ 150 ಕ್ಕೂ ಹೆಚ್ಚಿರುವ ಖಾಸಗಿ ಫ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಯಾವ ದಿನ ಯಾವ ವಿಷಯ ಭೋದಿಸಬೇಕು, ಕಿರು ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಯಾವಾಗ ನೀಡಬೇಕು ಎನ್ನುವ ಚಾರ್ಟ್ ಸಿದ್ಧಪಡಿಸಿದ್ದಾರೆ.
ಇನ್ನು ಹಳದಿ, ಕೆಂಪು ಹಾಗೂ ಹಸಿರು ಬಣ್ಣದ ಸಿಂಬಲ್ ಸಿದ್ಧಪಡಿಸಿ ಶೇ. 50 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ದತ್ತು ಪಡೆದು, ಅವದ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಪ್ರತಿ ಫ್ರೌಢಶಾಲೆಯ ಮುಖ್ಯಸ್ಥರು ಈ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡು ಹೆಚ್ಚುವರಿ ಅವಧಿಯಲ್ಲಿ ಪಾಠ ಭೋದಿಸಿ, ಪಠ್ಯಕ್ರಮ ಪೂರ್ಣಗೊಳಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅದರಂತೆ ಫ್ರೌಢಶಾಲೆಯ ಮುಖ್ಯಸ್ಥರು ಶಾಲೆ ಅವಧಿ ಮುಗಿದ ಮೇಲೆ ಹೆಚ್ಚುವರಿ ಕ್ಲಾಸ್ ತೆಗೆದುಕೊಂಡು ಬೋಧನೆ ಪೂರ್ಣಗೊಳಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಸಹ ಶಿಕ್ಷಕರ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ವೇಳೆ ಆನ್ಲೈನ್ ಶಿಕ್ಷಣದ ಮೂಲಕ ಕಲಿತಿದ್ದ ಪಠ್ಯಗಳನ್ನು ಮತ್ತೊಮ್ಮೆ ಕಲಿಯುತ್ತಿದ್ದಾರೆ. ಪ್ರತಿ 15 ದಿನಕ್ಕೊಮ್ಮೆ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಕೀ ಉತ್ತರಗಳನ್ನು ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿದೆ.