ಕಾರವಾರ: ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕಾರವಾರದಲ್ಲಿ ನಿಮಿಷಗಳ ಕಾಲ ನೆರಳು ಗೋಚರವಾಗದ ಕೌತುಕವೊಂದು ಭಾನುವಾರ ನಡೆದಿದೆ. ಹೌದು, ಸೂರ್ಯನು ಶಿರೋ ಬಿಂದುವಿನ ಮೇಲೆ ಹಾದು ಹೋದ ಪರಿಣಾಮ ಮಧ್ಯಾಹ್ನ 12.31ಕ್ಕೆ ಸುಮಾರು 1 ನಿಮಿಷದ ಅವಧಿಗೆ ನೆರಳು ಕನಿಷ್ಠ ಪ್ರಮಾಣದಲ್ಲಿ ಗೋಚರಿಸಿದೆ. ಈ ವಿದ್ಯಮಾನವನ್ನು ನಗರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವೀಕ್ಷಿಸಲಾಯಿತು. ಈ ಕೌತುಕವನ್ನು 'ಶೂನ್ಯ ನೆರಳಿನ ದಿನ'ವೆಂದು ಕರೆಯಲಾಗುತ್ತದೆ.
ವಿದ್ಯಾಮಾನಕ್ಕೆ ಕಾರಣವೇನು?: ಸಾಮಾನ್ಯವಾಗಿ ಸೂರ್ಯ ಪ್ರತಿ ದಿನದ ಮಧ್ಯಾಹ್ನದ ವೇಳೆ ನೆತ್ತಿಯ ಮೇಲೆ ಇದ್ದರೂ ಕೂಡ ಶಿರೋ ಬಿಂದುವಿನ ಮೇಲೆ ಇರುವುದಿಲ್ಲ. ಸೂರ್ಯ ಗರಿಷ್ಠ ಎತ್ತರ ತಲುಪಿದಾಗ ಅದು ಶಿರೋ ಬಿಂದುವಿನ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಭೂಮಿಯ ಆವರ್ತನೆಯ ಅಕ್ಷ ಅದರ ಕಕ್ಷಾತಲಕ್ಕೆ 23.5 ಡಿಗ್ರಿ ಓರೆಯಾಗಿರುವುದೇ ಇದಕ್ಕೆ ಕಾರಣ. ಋತುಮಾನಗಳಿಗೂ ಇದೇ ಕಾರಣ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ್ ದೇಶಪಾಂಡೆ ತಿಳಿಸಿದರು.
ವರ್ಷಕ್ಕೆ 2 ಬಾರಿ ಬರುವ ಅಚ್ಚರಿ: "ಡಿಸೆಂಬರ್ 21ರಂದು ದಕ್ಷಿಣದ ಗರಿಷ್ಠತೆಯನ್ನು ತಲುಪಿ ಉತ್ತರಕ್ಕೆ ಹೊರಳುವುದರಿಂದ ಆ ಘಟನೆಗೆ ಉತ್ತರಾಯಣ ಎಂದು ಹೆಸರು. ಆ ಮಧ್ಯಾಹ್ನದ ನೆರಳು ಯಾವುದೇ ಮಧ್ಯಾಹ್ನದ ನೆರಳಿಗೆ ಹೋಲಿಸಿದರೆ ಗರಿಷ್ಠವಾಗಿದೆ. ಜೂನ್ 21ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುವುದರಿಂದ ಆ ಘಟನೆಗೆ ದಕ್ಷಿಣಾಯನ ಎಂದು ಹೆಸರು. ಆ ಮಧ್ಯಾಹ್ನದ ನೆರಳು ಕನಿಷ್ಠವಾಗಿದೆ. ಸೂರ್ಯನ ಈ ಉತ್ತರ-ದಕ್ಷಿಣ ಚಲನೆಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ" ಎಂದೇ ಕರೆಯುತ್ತಾರೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ.
ಶೂನ್ಯ ನೆರಳಿನ ದಿನದ ತತ್ವ: "ಕರ್ಕಾಟಕ ಹಾಗೂ ಮಕರ ಸಂಕ್ರಾಂತ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯ ಶಿರೋ ಬಿಂದುವಿನ ಮೇಲೆ ಹಾದು ಹೋಗುವ ಕಾರಣ ಆ ದಿನಗಳಲ್ಲಿ ಮಧ್ಯಾಹ್ನದ ನೆರಳು ಇಲ್ಲದಾಗುತ್ತದೆ. ಇದೇ ಶೂನ್ಯ ನೆರಳಿನ ದಿನದ ತತ್ವ" ಎಂದು ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಮೇಸ್ತಾ ತಿಳಿಸಿದರು.
ಶೂನ್ಯ ನೆರಳಿನ ದಿನ ಎಂದರೇನು?: ಪ್ರತಿವರ್ಷ ಏಪ್ರಿಲ್, ಮೇ ಅಥವಾ ಆಗಸ್ಟ್ ನಲ್ಲಿ ಈ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತದೆ. ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಕಾರವಾರದಲ್ಲಿ ಕೌತುಕ... ನೆಲದಲ್ಲಿ ಕಾಣದ ನೆರಳು!
ಇದನ್ನೂ ಓದಿ: ಶೂನ್ಯ ನೆರಳು ದಿನ: ಖಗೋಳ ಕೌತುಕಕ್ಕೆ ಸಾಕ್ಷಿಯಾದ ಉದ್ಯಾನ ನಗರಿ..