ಹೊನ್ನಾವರ: ಕೆಲ ದಿನಗಳ ಹಿಂದೆ ತಾಲೂಕಿನ ಮಂಕಿ ಮಾವಿನಕಟ್ಟೆ ಬಳಿ ರಸ್ತೆಯ ಮೇಲೆ ಬಿದ್ದಿದ್ದ ಬೆಲೆಬಾಳುವ ಆಭರಣಗಳಿದ್ದ ಬ್ಯಾಗನ್ನು ಅಲ್ಲಿಯೇ ಹತ್ತಿರವಿದ್ದ ತರಕಾರಿ ಅಂಗಡಿಯವರು ತೆಗೆದುಕೊಂಡು ಮಂಕಿ ಪೊಲೀಸ್ ಠಾಣೆಗೆ ಒಪ್ಪಿಸಿ ಕಳೆದುಕೊಂಡಿದ್ದ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೂಲತಃ ಬಳಕೂರಿನವರಾದ ಶಿಲ್ಪಾ ಜೂಜೆ ಡಯಾಸ್ ಎಂಬುವರು ಮುಂಬೈನಿಂದ ರೈಲಿನಲ್ಲಿ ಬರುವಾಗ ಸುರಕ್ಷತಾ ದೃಷ್ಟಿಯಿಂದ ಆಭರಣ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಎರಡು ಮೊಬೈಲ್ ಹಾಗೂ 600 ರೂ. ನಗದನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿದ್ದರು. ಕರ್ಕಿ ರೈಲ್ವೆ ನಿಲ್ದಾಣದಲ್ಲಿ ಇಳಿದು ರಿಕ್ಷಾದಲ್ಲಿ ಮಂಕಿಗೆ ಬರುತ್ತಿರುವಾಗ ಮಾವಿನಕಟ್ಟೆಬಳಿ ಬ್ಯಾಗ್ ಬಿದ್ದು ಹೋಗಿತ್ತು ಎನ್ನಲಾಗಿದೆ.
ರಸ್ತೆಯಲ್ಲಿ ಬ್ಯಾಗ್ ಬಿದ್ದಿರುವುದನ್ನು ಕಂಡ ಸ್ಥಳೀಯ ತರಕಾರಿ ಅಂಗಡಿಯವರಾದ ರಮೇಶ್ ಅನಂತ ನಾಯ್ಕ ಎಂಬವರು, ಅಲ್ಲಿಯೇ ಸಮೀಪ ಗ್ಯಾರೇಜ್ನಲ್ಲಿದ್ದ ರಾಘವೇಂದ್ರ ನಾರಾಯಣ ಖಾರ್ವಿ ಹಾಗೂ ಉಲ್ಲಾಸ ಅಣ್ಣಪ್ಪ ನಾಯ್ಕ ಅವರ ಜೊತೆಗೂಡಿ, ಬ್ಯಾಗನ್ನು ಎತ್ತಿ ಪರಿಶೀಲಿಸಿದ್ದಾರೆ. ಅದರಲ್ಲಿ ಬಂಗಾರದ ಆಭರಣ ಹಾಗೂ ಅತ್ಯಮೂಲ್ಯ ದಾಖಲೆಗಳಿರುವುದನ್ನು ಗಮನಿಸಿದ್ದಾರೆ. ಬಳಿಕ ವಾರಸುದಾರರನ್ನು ಪತ್ತೆ ಮಾಡಲು ಯತ್ನಿಸಿದರಾದರೂ ಸಾಧ್ಯವಾಗದೆ ಸಿಕ್ಕಿದ ಬ್ಯಾಗನ್ನು ಮಾಲು ಸಮೇತ ಪೊಲೀಸರಿಗೊಪ್ಪಿಸಿದ್ದಾರೆ.
ಸಿಕ್ಕಿದ ಆಭರಣಗಳ ಮೌಲ್ಯವೇ ಸುಮಾರು ನಾಲ್ಕೂವರೆ ಲಕ್ಷ ರೂ.ಗಳಷ್ಟಾಗಬಹುದೆಂದು ಅಂದಾಜಿಸಲಾಗಿದ್ದು, ಭಟ್ಕಳ ಉಪವಿಭಾಗದ ಎಎಸ್ಪಿ ನಿಖಿಲ್ ಬುಳ್ಳಾವರ್ ಹಾಗೂ ಮಂಕಿ ಠಾಣೆಯ ಪಿಎಸ್ಐ ನೀತು, ಸಿಕ್ಕಿದ ಎಲ್ಲಾ ವಸ್ತುಗಳನ್ನು ಕಳೆದುಕೊಂಡಿದ್ದ ಶಿಲ್ಪಾ ಡಯಾಸ್ ಅವರಿಗೆ ಮರಳಿಸಿದ್ದಾರೆ.