ಶಿರಸಿ (ಉತ್ತರಕನ್ನಡ): ತಾಲೂಕಿನ ಕಲಕರಡಿ ಗ್ರಾಮದ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮೂರಿನ ಶಾಲೆಗೆ ಬಣ್ಣ ಬಳಿದು ಮಾದರಿಯಾಗಿದ್ದಾರೆ.
ಶಿರಸಿಯ ಅಂಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಕರಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಣ್ಣ-ಬಣ್ಣ ಕಾಣದೇ ಎಷ್ಟೋ ವರ್ಷಗಳಾಗಿತ್ತು. ಎಸ್‍ಡಿಎಂಸಿಯವರು ಶಾಲೆಗೆ ಬಣ್ಣ ಬಳಿಯಲು ನಾಲ್ಕೈದು ವರ್ಷಗಳಿಂದ ಅನುದಾನ ಕೇಳಿ ಕೇಳಿ ಸುಸ್ತಾಗಿದ್ದರು. ಇದೀಗ ಟೀಂ ಕಲಕರಡಿಯ 30 ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಸುಣ್ಣ ಬಣ್ಣ ಮಾಡಿದ್ದಾರೆ. ಅನೇಕ ವರ್ಷಗಳಿಂದ ಕಳೆಗುಂದಿದ್ದ ಶಾಲೆಗೆ ಚೆಂದದ ಸ್ಪರ್ಷ ನೀಡಿ, ಮಾದರಿಯಾಗಿದ್ದಾರೆ.
ಶಾಲೆಯ ಜೊತೆಗೆ ಊರಿನ ಮಾರುತಿ ದೇವಸ್ಥಾನಕ್ಕೂ ಬಣ್ಣ ಹಚ್ಚಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ಮ ಊರಿನ ಶಾಲೆಗೆ ಬಣ್ಣ ಮಾಡಲು ಎಸ್‍ಡಿಎಂಸಿಯವರು ನಾಲ್ಕೈದು ವರ್ಷಗಳಿಂದ ಇಲಾಖೆಯ ಬಳಿ ಅನುದಾನ ಕೇಳುತ್ತಿದ್ದರು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದೇ ಇದ್ದಾಗ ನಾವೇ ಬಣ್ಣ ಹಚ್ಚಿದ್ದೇವೆ. ನಾವು ಕಲಿತ ಶಾಲೆಗೆ ನಮ್ಮಿಂದಾದ ಸಹಾಯ ಮಾಡಿದ ಖುಷಿ ನಮಗಿದೆ ಎಂದರು.
ಟೀಂ ಕಲಕರಡಿ ಯುವಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿ ಹಾಡಿ ಹೊಗಳಿದ್ದಾರೆ.