ಕಾರವಾರ : ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲದಿಗ್ಬಂಧನದ ನಡುವೆ ಹೆರಿಗೆ ನೋವು ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿಯನ್ನು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಯುವಕರು ಬೋಟ್ ಮೂಲಕ ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಮೌಳಂಗಿಯಲ್ಲಿ ಈ ಘಟನೆ ನಡೆದಿದೆ. ಮೌಳಂಗಿ ಗ್ರಾಮದ ನಿವಾಸಿ ಭೂಮಿಕಾ ಕಾಂಬ್ಳೆ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಜಲದಿಗ್ಬಂಧನಕ್ಕೊಳಗಾಗಿದ್ದರು. ವರುಣನ ಅಬ್ಬರದಿಂದಾಗಿ ದಾಂಡೇಲಿಯ ಮೌಳಂಗಿ ರಸ್ತೆ ಜಲಾವೃತಗೊಂಡ ಹಿನ್ನೆಲೆ ಸಂಚಾರ ಬಂದಾಗಿತ್ತು. ಇದೇ ಸಮಯದಲ್ಲಿ ಗರ್ಭಿಣಿ ಭೂಮಿಕಾ ಕಾಂಬ್ಳೆಗೆ ಹೆರಿಗೆ ನೋವು ಕಾಣಿಸಿದೆ.
ರಸ್ತೆ ಸಂಪೂರ್ಣ ಜಲಾವೃತವಾದ ಕಾರಣ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲದ ಕಾರಣ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಯುವಕರು ನೆರವಿಗೆ ದಾವಿಸಿದ್ದಾರೆ.
ಮೌಳಂಗಿ ಇಕೋ ಪಾರ್ಕ್‌ನ ಟ್ಯೂಬ್ ಬೋಟ್ ಸಹಾಯದಿಂದ ಗರ್ಭಿಣಿಯನ್ನು ನೆರೆಯಿಂದ ಪಾರು ಮಾಡಿ ಬಳಿಕ ಕಾರಿನ ಮೂಲಕ ದಾಂಡೇಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೆರಿಸಿ ಮಾನವೀಯತೆ ಮೆರೆದಿದ್ದಾರೆ.
ನೌಕಾನೆಲೆ ತುರ್ತು ರಕ್ಷಣಾ ತಂಡದಿಂದ ಕಾರ್ಯಾಚರಣೆ:
ಗಂಗಾವಳಿ ಹಾಗೂ ಕಾಳಿ ನದಿ ಪ್ರವಾಹಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಮಂದಿಯನ್ನು ನೌಕಾನೆಲೆಯ ತುರ್ತು ರಕ್ಷಣಾ ತಂಡ ರಕ್ಷಣೆ ಮಾಡಿದೆ. ಭಾರಿ ಮಳೆಯಿಂದಾಗಿ ಮತ್ತು ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ಕಾರವಾರ ಹತ್ತಾರು ಹಳ್ಳಿಗಳು ಹಾಗೂ ಗಂಗಾವಳಿ ನದಿಯಲ್ಲಿ ಭಾರೀ ನೀರು ಹರಿದುಬಂದ ಕಾರಣ ಅಂಕೋಲಾ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿ ಹಾನಿಯಾಗಿತ್ತು.
ತಕ್ಷಣ ಜಿಲ್ಲಾಡಳಿತ ಮನವಿಯಂತೆ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದ ನೌಕಾಪಡೆಯ ತುರ್ತು ರಕ್ಷಣಾ ತಂಡ ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿ 8 ಮಂದಿಯನ್ನ ರಕ್ಷಣೆ ಮಾಡಿದೆ.
ಕಾರವಾರ ತಾಲ್ಲೂಕಿನ ಶಿನಗುಡ್ಡ, ಭೈರೆ ಗ್ರಾಮಗಳಲ್ಲಿ ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ನೂರಕ್ಕೂ ಅಧಿಕ ಮಂದಿಯನ್ನು ನೆರೆ ಪ್ರದೇಶದಿಂದ ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರ ಮಾಡಿದೆ. ಒಟ್ಟು 16 ಮುಳುಗು ತಜ್ಞರು, 4 ಜೆಮಿನಿ ಬೋಟ್, ಲೈಫ್ ಜಾಕೆಟ್‌ಗಳು, ಲೈಫ್ ಬೋಯಾಗಳು ಸೇರಿ ರಕ್ಷಣಾ ಸಾಮಗ್ರಿಗಳೊಂದಿಗೆ ನಿಯೋಜನೆಗೊಂಡಿದ್ದ ತಂಡ ಆಪತ್ ಕಾಲದಲ್ಲಿ ತಕ್ಷಣ ನೆರವಿಗೆ ದಾವಿಸಿ ನೂರಾರು ಜನರ ಪ್ರಾಣ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.