ಭಟ್ಕಳ: ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಜನರು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾರನ್ನಾದರು ಸಂಪರ್ಕಿಸಬೇಕೆಂಬ ವೇಳೆ ನೆಟ್‍ವರ್ಕ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಾ ಬರಲಾಗಿದೆ. ಆದರೂ ಸಹ ನೀಡಿದ ಭರವಸೆ ಈವರೆಗೆ ಈಡೇರದ ಹಿನ್ನೆಲೆ ಅಲ್ಲಿನ ಯುವಕರು ಮರವನ್ನೇರಿ ನೆಟ್ವರ್ಕ್ಗಾಗಿ ಪರಿತಪಿಸುವ ಪರಿಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಭಟ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಕೋಣಾರ ಗ್ರಾಮ ಪಂಚಾಯತ್ ಸುತ್ತಲೂ ಕಾಡಿನಿಂದಲೇ ಕೂಡಿದ್ದು ಕೃಷಿ, ಜಮೀನು ಸಹಿತ ಕೂಲಿ ಕೆಲಸ ಮಾಡಿಕೊಂಡಿರುವ ಜನರೇ ಹೆಚ್ಚು ವಾಸವಿದ್ದಾರೆ. ಆದರೆ ಸಮರ್ಪಕವಾದ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಇಲ್ಲ. ಎರಡು ವರ್ಷಗಳ ಕಾಲ ಈ ಬಗ್ಗೆ ಸಂಸದರಿಂದ ಹಿಡಿದು ಶಾಸಕರ ತನಕವೂ ಮನವಿ ಮಾಡಲಾಗಿದೆ. ಎಂಟು ತಿಂಗಳ ಹಿಂದೆ ನೆಟ್ವರ್ಕ್ ಟವರ್ ಮಾಡಿಸಿಕೊಡುವ ಭರವಸೆ ನೀಡಿದ ಶಾಸಕರು ಮತ್ತೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ.
ಸರಿಸುಮಾರು 300-400 ಮನೆಗಳಿರುವ ಈ ಪ್ರದೇಶದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚು ಇದ್ದಾರೆ. ಮೊಬೈಲ್ ನೆಟ್ವರ್ಕ್ ಟವರ್ನಿಂದ ಕೋಣಾರ ಗ್ರಾಮದ ಜತೆಗೆ ಸುತ್ತಮುತ್ತಲಿನ ಕುಂಟವಾಣಿ, ಹಡೀನ್, ಬೀಳುರಮನೆ, ಕೋಟಖಂಡ ಭಾಗಗಳಿಗೆ ಪ್ರಯೋಜನ ಸಿಗಲಿದೆ. ಇಲ್ಲಿನ ಜನರ ಸಾಮಾನ್ಯ ಬೇಡಿಕೆಯಾದ ಮೊಬೈಲ್ ನೆಟ್ವರ್ಕ್ ನಿರ್ಮಿಸಿ ಬೇರೆ ಊರಿನವರಂತೆ ನಮಗೂ ಬದುಕಲು ಅವಕಾಶ ಮಾಡಿಕೊಂಡಿ ಎಂಬ ಮನವಿಯೂ ಸಹ ಕೇಳಿ ಬಂದಿದೆ.
ವಿಡಿಯೋ ಹರಿಬಿಟ್ಟ ಯುವಕರು:
ಮನವಿಗೆ ಸ್ಪಂದಿಸದಿರುವುದಕ್ಕೆ ಬೇಸತ್ತ ಅಲ್ಲಿನ ಕೆಲ ಯುವಕರು ಜನಪ್ರತಿನಿಧಿಗಳ ಕಣ್ಣು ತೆರೆಸುವ ದೃಷ್ಟಿಯಿಂದ ನೆಟ್ವರ್ಕ್ಗಾಗಿ ಗ್ರಾಮಸ್ಥರು ಮಾಡುವ ಹರಸಾಹಸವನ್ನು ತೋರಿಸಬೇಕೆಂಬ ಹಿನ್ನೆಲೆ ಮರವನ್ನೇರಿ ತಮ್ಮ ಸಮಸ್ಯೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಒಂದು ವೇಳೆ ನೀಡಿದ ಭರವಸೆ ಈಡೇರದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಮಾಡುವತ್ತ ಆಲೋಚಿಸಬೇಕಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
ತುರ್ತು ಸಂದರ್ಭ ಎದುರಾದರೆ?
ಗ್ರಾಮೀಣ ಭಾಗದ ಜನರ ತುರ್ತು ಪರಿಸ್ಥಿತಿ, ಅನಾರೋಗ್ಯದಂತಹ ಸಂದರ್ಭದಲ್ಲಿ ನಗರಕ್ಕೆ ಬರಬೇಕಾದಾಗ ಅಥವಾ ಹಳ್ಳಿಗಳಲ್ಲಿನ ಕುಟುಂಬಸ್ಥರನ್ನು ನಗರ ಭಾಗದ ಜನರು ಸಂಪರ್ಕಿಸಲು ಅಸಾಧ್ಯವಾಗದಂತಹ ಸಂಗತಿಗಳು ಕಣ್ಣ ಮುಂದೆ ಕಾಣ ಸಿಗುತ್ತವೆ. ಇಂತಹ ಸಂದರ್ಭದಲ್ಲಿ ಸಮಸ್ಯೆ ಸಂಭವಿಸಿದರೆ ಅದಕ್ಕೆ ನೇರವಾಗಿ ಜನಪ್ರತಿನಿಧಿಗಳೇ ಹೊಣೆಯಾಗಲಿದ್ದು, ಈ ತಕ್ಷಣವೇ ನೆಟ್ವರ್ಕ್ ವ್ಯವಸ್ಥೆ ಒದಗಿಸಿಕೊಡಬೇಕಿದೆ ಎಂಬುದು ಜನರ ಆಗ್ರಹವಾಗಿದೆ. 20ಕ್ಕೂ ಅಧಿಕ ಮನೆಯಲ್ಲಿ ಅಂದರೆ ಆರ್ಥಿಕವಾಗಿ ಶಕ್ತರಿರುವವರು ಬಿ.ಎಸ್.ಎನ್.ಎಲ್. ಬ್ರಾಡ್ ಬ್ಯಾಂಡ್ ಸಂಪರ್ಕ ಹಾಕಿಸಿಕೊಂಡಿದ್ದು, ಅದನ್ನು ಹೊರತುಪಡಿಸಿ ಉಳಿದ ಸಾಮಾನ್ಯ ಮಧ್ಯಮ ವರ್ಗದ ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ.
ಕೋವಿಡ್ ಹಿನ್ನೆಲೆ ವರ್ಕ್ ಫ್ರಂ ಹೋಮ್, ನೆಟ್ವರ್ಕ್ ಸಮಸ್ಯೆ ಅಡ್ಡಿ:
ಹಳ್ಳಿಯಿಂದ ನಗರ ಭಾಗಕ್ಕೆ ಬಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಸದ್ಯ ಕೋವಿಡ್ ಲಾಕ್ಡೌನ್ ಹಿನ್ನೆಲೆ ಊರಿಗೆ ವಾಪಸ್ ಮರಳಿ ಬಂದಿದ್ದು, ಮನೆಯಲ್ಲಿಯೇ ವರ್ಕ್ ಫ್ರಂ ಹೋಮ್ ಮೂಲಕ ಕೆಲಸ ಮಾಡುತ್ತಿದ್ದು, ಅವರ ಪಾಡು ಇನ್ನೂ ಚಿಂತಾಜನಕವಾಗಿದೆ. ಕಾರಣ ಸದ್ಯ ಈ ಭಾಗದಲ್ಲಿ ಕೇವಲ ಬಿ.ಎಸ್.ಎನ್.ಎಲ್. ಬ್ರಾಡ್ ಬ್ಯಾಂಡ್ ಸಂಪರ್ಕವೊಂದೇ ಇದ್ದು, ಅದಕ್ಕಾಗಿ ಅವರು 10-12 ಸಾವಿರ ರೂ. ಹಣ ನೀಡಿ ಸಂಪರ್ಕದ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ಅದು ಸಹ ನಿಗದಿತವಾಗಿ ಸಂಪರ್ಕದಲ್ಲಿರವುದು ಕಷ್ಟ ಸಾಧ್ಯ. ನಿತ್ಯವೂ ರಿಪೇರಿ, ಸಂಪರ್ಕ ಕಡಿತದಂತಹ ಉತ್ತರವೇ ಬರಲಿದೆ ಎಂಬ ಆರೋಪ ಯುವಕರದ್ದಾಗಿದೆ. ಇದರಿಂದಾಗಿ ಮನೆಯಲ್ಲಿ ಕುಳಿತು ಕೆಲಸ ಮಾಡುವ ಯುವಕರಿಗೂ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.