ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮಣ್ ಬನ್ಸೋಡೆ ಇಂದು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರಿಗೆ ತನ್ನ ಬೆಂಬಲವನ್ನು ಅವರು ಘೋಷಿಸಿದ್ದಾರೆ.
ಮುಂಡಗೋಡ ಕಾಂಗ್ರೆಸ್ ಮುಖಂಡ ಬನ್ಸೋಡೆ ತಮಗೆ ಟಿಕೆಟ್ ನೀಡಿಲ್ಲ ಎಂದು ಕಾಂಗ್ರೆಸ್ ಬಂಡಾಯ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬಿ ಫಾರ್ಮ್ ಇಲ್ಲದ ಕಾರಣ ಒಂದು ನಾಮಪತ್ರ ತಿರಸ್ಕೃತವಾಗಿತ್ತು. ಆದರೆ, ಪಕ್ಷೇತರರಾಗಿ ಕಣದಲ್ಲಿದ್ದರು. ಆದರೆ, ಹಿರಿಯ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಾಸ್ ಪಡೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಆರ್.ವಿ.ದೇಶ್‌ಪಾಂಡೆ ಮನವೊಲಿಸಿ ಜಿಲ್ಲೆ ಅಥವಾ ರಾಜ್ಯದಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಈ ಕಾರಣದಿಂದಾಗಿ ಕಾಂಗ್ರೆಸ್ ತತ್ವ ಸಿದ್ದಾಂತ ಮೆಚ್ಚಿ ನಾಮಪತ್ರ ಹಿಂಪಡೆಯುವ ಕೊನೇ ದಿನವಾದ ಇಂದು ನನ್ನ ನಾಮಪತ್ರ ಹಿಂಪಡೆದಿದ್ದೇನೆ. ಅಭ್ಯರ್ಥಿ ಭೀಮಣ್ಣ ನಾಯ್ಕರ್ ಗೆಲುವಿಗಾಗಿ ಬೆಂಬಲ ನೀಡುತ್ತಿರುವುದಲ್ಲದೇ, ಕಾರ್ಯಕರ್ತರು ಕೂಡಾ ಒಗ್ಗಟ್ಟಾಗಲು ಕಾಂಗ್ರೆಸ್ ಮುಖಂಡ ಲಕ್ಷ್ಮಣ ಬನ್ಸೋಡೆ ಕರೆ ನೀಡಿದ್ದಾರೆ.