ಕಾರವಾರ: ಪ್ರತಿವರ್ಷ ಜೂನ್ 17ರಂದು ವಿಶ್ವ ಮೊಸಳೆ ದಿನವನ್ನು ಆಚರಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಮೊಸಳೆಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದೇ ಈ ದಿನದ ಉದ್ದೇಶ. ಅದರಂತೆ ಹಲವೆಡೆ ಮೊಸಳೆಗಳ ಪಾರ್ಕ್ ನಿರ್ಮಿಸಲಾಗಿದೆ.
ದಾಂಡೇಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಪರಿಸರ, ಅಭಯಾರಣ್ಯ, ಜಲಸಾಹಸಿ ಚಟುವಟಿಕೆಗಳು ದೇಶ, ವಿದೇಶಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಇದರ ಜೊತೆಗೆ, ಕಳೆದ 7 ತಿಂಗಳ ಹಿಂದೆ ಲೋಕಾರ್ಪಣೆಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಮೊಸಳೆ ಪಾರ್ಕ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.
ದಾಂಡೇಲಿ ಹಚ್ಚ ಹಸಿರಿನಿಂದ ಕೂಡಿರುವ ಸುಂದರ ಪಟ್ಟಣ. ಪಶ್ಚಿಮ ಘಟ್ಟದ ಪ್ರಮುಖ ವನ್ಯಜೀವಿ ತಾಣಗಳಲ್ಲಿ ಒಂದಾಗಿದ್ದು ಹುಲಿ, ಆನೆ, ಕಪ್ಪು ಪ್ಯಾಂಥರ್, ಹಾರ್ನ್ಬ್ ಬಿಲ್ಸ್ ಹೀಗೆ ವಿವಿಧ ಪ್ರಭೇದಗಳ ಪ್ರಾಣಿ ಪಕ್ಷಿಗಳ ನೈಸರ್ಗಿಕ ನೆಲೆಯಾಗಿದೆ. ಇಂತಹ ಪ್ರದೇಶದಲ್ಲಿ ಇದೀಗ ಹೇರಳವಾಗಿ ಕಾಣಸಿಗುವ ಮೊಸಳೆಗಳೂ ಕೂಡ ಪ್ರವಾಸಿಗರ ಪಾಲಿಗೆ ಆಕರ್ಷಣೀಯವಾಗಿವೆ.
ಈ ಸರೀಸೃಪಗಳ ವೀಕ್ಷಣೆಗಾಗಿಯೇ ದಾಂಡೇಲಿ ಪಟ್ಟಣದ ದಾಂಡೇಲಪ್ಪ ದೇವಸ್ಥಾನದ ಬಳಿಯ ಕಾಳಿ ನದಿ ತಟದಲ್ಲಿ ಮೊಸಳೆ ಪಾರ್ಕ್ ತೆರೆಯಲಾಗಿದೆ. ಈ ಉದ್ಯಾನವನದಲ್ಲಿ ಮಗ್ಗರ್ ಮೊಸಳೆಗಳು (ಭಾರತೀಯ ಮೊಸಳೆಗಳು) ಕಾಣಸಿಗುತ್ತವೆ. ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಅಡಿಯಲ್ಲಿ ಈ ಪಾರ್ಕ್ ಬರುತ್ತದೆ.
ಸುಮಾರು ಎರಡು ಎಕರೆ ಜಾಗದಲ್ಲಿ ಈ ಉದ್ಯಾನವನ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಮೊಸಳೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳ ಪ್ರತಿರೂಪಗಳನ್ನು ಸೃಷ್ಟಿಸಲಾಗಿದೆ. ಜೊತೆಗೆ ಇಲ್ಲಿ ಮಕ್ಕಳ ಮೋಜಿಗೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವನ್ಯಜೀವಿ ಅಭಯಾರಣ್ಯದ ಕಾಳಿ ನದಿ ತಟದಲ್ಲಿರುವ ಈ ಉದ್ಯಾನವನದಿಂದಲೇ ನದಿಯಲ್ಲಿರುವ ಮೊಸಳೆಗಳನ್ನು ನೋಡಬಹುದು. ಏಪ್ರಿಲ್ನಿಂದ ಸೆಪ್ಟೆಂಬರ್ ನಡುವೆ ಮೊಸಳೆಗಳು ನೋಡಲು ಹೆಚ್ಚು ಕಾಣಸಿಗುತ್ತವೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.
ಇದನ್ನೂ ಓದಿ: ವಿಡಿಯೋ: ಅಂಜನಾದ್ರಿ ಮೆಟ್ಟಿಲೋತ್ಸವಕ್ಕೆ ಚಾಲನೆ
ಈ ಮೊಸಳೆಗಳು ನೋಡುವುದಕ್ಕೆ ಎಷ್ಟು ಆಕರ್ಷಕವೋ ಅಷ್ಟೇ ಅಪಾಯಕಾರಿ. ನದಿಗಳಿಗಿಳಿದ ಅದೆಷ್ಟೋ ಜನರ ಮೇಲೆ ದಾಳಿ ಸಹ ಮಾಡಿವೆ. ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಿಗೂ ನುಗ್ಗಿ ಆಗಾಗ ಆತಂಕ ಸೃಷ್ಟಿಸುತ್ತಿವೆ. ನೀರಿಗೆ ಕೈಕಾಲು ತೊಳೆಯಲು ಇಳಿದವರನ್ನು ಹೊತ್ತೊಯ್ದ ಉದಾಹರಣೆ ಇವೆ. ಆದರೆ ಮೊಸಳೆ ಪಾರ್ಕ್ನಲ್ಲಿ ಈ ಭಯ ಇಲ್ಲ. ಬರುವಂತ ಪ್ರವಾಸಿಗರಿಗೆ ಮೊಸಳೆಯಿಂದ ಯಾವುದೇ ಅಪಾಯವಾಗುವುದಿಲ್ಲ. ಪ್ರವಾಸಿಗರು ಕೂಡ ಜಾಗೃತೆಯಿಂದ ನದಿಗಳಿಗೆ ಇಳಿಯದೇ ದೂರದಿಂದ ನೋಡಬಹುದಾಗಿದೆ.