ಭಟ್ಕಳ : ಗ್ರಾಮ ಪಂಚಾಯತ್ ಚುನಾವಣೆ ಚುರುಕು ಪಡೆದುಕೊಂಡಂತೆ ಭಟ್ಕಳದ ಕಾಯ್ಕಿಣಿಯಲ್ಲಿ ಹೈಡ್ರಾಮ ನಡೆದಿದೆ. ನಾಮಪತ್ರ ವಾಪಸ್ ಪಡೆಯಲು ಪಂಚಾಯತ್ ಕಚೇರಿಗೆ ಬಂದ ಪರಿಶಿಷ್ಟ ಪಂಗಡದ ಮಹಿಳೆಯನ್ನು ಗುಂಪೊಂದು ಪೊಲೀಸ್ ಅಧಿಕಾರಿಗಳ ಎದುರೇ ಅಪಹರಿಸಿ ಪರಾರಿಯಾಗಿದೆ. ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ.
ಘಟನೆಯ ವಿವರ : ಕಾಯ್ಕಿಣಿ ಗ್ರಾಮ ಪಂಚಾಯತ್ನ 26 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಕಾಯ್ಕಿಣಿ ಶಿರಾಣಿ ಮೂಲದ ಸಣ್ಣಿ ಸಣ್ಣಗೊಂಡ ಎನ್ನುವವರು ಕೋಟದಮಕ್ಕಿ-2 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದರು. ಲಭ್ಯವಿರುವ ಮಾಹಿತಿ ಪ್ರಕಾರ, ಬಿಜೆಪಿ ಬೆಂಬಲಿತರೇ ಮುಂದೆ ನಿಂತು ಸಣ್ಣಿಯವರನ್ನು ಕಣಕ್ಕಿಳಿಸಿದ್ದಾರೆ.
ಆದರೆ, ನಾಮಪತ್ರ ಸಲ್ಲಿಸಿದ ನಂತರ ಸಣ್ಣಿಗೊಂಡ ಕಾಂಗ್ರೆಸ್ ಬೆಂಬಲಿತ ಪಾಳೆಯವನ್ನು ಸೇರಿಕೊಂಡು ನಾಮಪತ್ರ ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದರು. ಆದರೆ, ಬಿಜೆಪಿ ಬೆಂಬಲಿತರು ತಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ ಮುಖಂಡರು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಓದಿ: ಉಪಸಭಾಪತಿ ಕತ್ತು ಹಿಡಿದು ಎಳೆದಾಡಿದ್ದು, ಕಾಂಗ್ರೆಸ್ನ ಸಂಸ್ಕೃತಿ ತೋರಿಸುತ್ತೆ.. ಸಿಎಂ ಬಿಎಸ್‌ವೈ ಕಿಡಿ
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ಮಧ್ಯಾಹ್ನದ ಸುಮಾರಿಗೆ ಸಣ್ಣಿಗೊಂಡ ಕೆಲ ಕಾಂಗ್ರೆಸ್ ಪರ ಮುಖಂಡರೊಂದಿಗೆ ಕಾರಿನಲ್ಲಿ ಬಂದು ಪಂಚಾಯತ್ ಕಚೇರಿಯ ಮುಂದೆ ಇಳಿದರು. ಇದಕ್ಕಾಗಿಯೇ ಕಾಯುತ್ತ ಕುಳಿತಿದ್ದ ವಿರೋಧಿ ಗುಂಪಿನ ಸದಸ್ಯರು ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಪಂಚಾಯತ್ ಕಚೇರಿಯಿಂದ ಅಪಹರಿಸಿಕೊಂಡು ಹೋಗಿದ್ದಾರೆ.
ಪೂರ್ವ ಯೋಜನೆಯಂತೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನಲ್ಲಿ ಮಹಿಳೆಯನ್ನು ಕೂರಿಸಿಕೊಂಡು ಅವರು ಪರಾರಿಯಾದ್ದಾರೆ. ಈ ಬಗ್ಗೆ ಸಣ್ಣಿಗೊಂಡ ಅವರ ಮಗ ಮಂಜುನಾಥ ಗೊಂಡ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.