ಭಟ್ಕಳ: ಆಹಾರಕ್ಕಾಗಿ ಅಲೆದಾಡುವ ವೇಳೆ ಕಾಡು ಮೊಲವೊಂದು ಹಂದಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿ ಗಾಯಗೊಂಡು ಬಳಲುತ್ತಿತ್ತು. ಇದನ್ನು ಕಂಡ ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ್ ವೈದ್ಯ ಅವರು ಮೊಲಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.
ಎಂದಿನಂತೆ ಬೆಳಗ್ಗೆ ವಾಕಿಂಗ್ ತೆರಳಿದ ಸಂದರ್ಭದಲ್ಲಿ ಗದ್ದೆಯಲ್ಲಿ ಹಂದಿ ಕಾಟ ತಪ್ಪಿಸಲು ರೈತರು ಹಾಕಿದ ಬೇಲಿಯ ಬಲೆಗೆ ಕಾಡು ಮೊಲವೊಂದು ಸಿಲುಕಿ ಒದ್ದಾಡುತ್ತಿತ್ತು. ಈ ವೇಳೆ ಕಾಲು, ತೊಡೆಯ ಭಾಗಕ್ಕೆ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶೈಲೇಶ ಅವರು ಮನೆಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಭಟ್ಕಳದ ಪಶು ಇಲಾಖೆಗೆ ಮೊಲವನ್ನು ತಂದು ಔಷದೋಪಚಾರ ಮಾಡಿಸಿ, ಆಹಾರ ನೀಡಿ ಅರಣ್ಯ ಇಲಾಖಾ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.
![wild rabbit Rescue](https://etvbharatimages.akamaized.net/etvbharat/prod-images/9303474_930_9303474_1603591150987.png)
ತೀರ ಗಾಯಗೊಂಡಿರುವ ಮೊಲ ಚೇತರಿಸಿಕೊಳ್ಳಲು ಇನ್ನೂ 3-4 ದಿನಗಳ ಚಿಕಿತ್ಸೆಯ ಅವಶ್ಯಕತೆ ಇದೆ. ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ವಹಿಸಿಕೊಂಡಿದ್ದು, ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ ಅವರ ಕಾಳಜಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಧನ್ಯವಾದ ಸಲ್ಲಿಸಿದರು.