ಕಾರವಾರ: ಅದು ಹೆದ್ದಾರಿಯಂಚಿನ ಪುಟ್ಟ ಗ್ರಾಮ. ಅಲ್ಲಿ ಕಳೆದೆರಡು ವರ್ಷದ ಹಿಂದೆ ಮಳೆಗಾಲದಲ್ಲಿ ಗುಡ್ಡ ಕುಸಿದು ಮೂರು ಮಕ್ಕಳು ಬಲಿಯಾಗಿದ್ದರು. ಇದಕ್ಕೆ ಹೆದ್ದಾರಿ ಅಗಲೀಕರಣದ ವೇಳೆ ನಡೆಸಿದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಆ ಗ್ರಾಮಕ್ಕೆ ಸಂಕಷ್ಟ ಎದುರಾಗಿದೆ. ಗುಡ್ಡದ ಬಂಡೆಗಲ್ಲುಗಳ ತೆರವಿಗೆ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರ ಕಲ್ಲುಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಇಲ್ಲಿನ ಜನ ನಿತ್ಯ ಭಯದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನದಿ ಅಂಚಿನ ತಗ್ಗು ಪ್ರದೇಶದಲ್ಲಿರುವ ಈ ತಂಡ್ರಕುಳಿ ಗ್ರಾಮದ ಮೇಲ್ಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಹೆದ್ದಾರಿಗೆ ಗುಡ್ಡಗಳು ಅಡ್ಡಿಯಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿ ಗುಡ್ಡ ತೆರವಿನ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳೆದ ಎರಡು ವರ್ಷದ ಹಿಂದೆ ಗ್ರಾಮದಲ್ಲಿ ಅರೆಬರೆ ತೆರವುಗೊಳಿಸಿದ ಗುಡ್ಡ ಕುಸಿದು ಕೆಳಭಾಗದ ಮನೆಯ ಮೇಲೆ ಬಿದ್ದು ಮೂವರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.
ಕೊನೆಗೆ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಕುಸಿಯಬಹುದಾದ ಗುಡ್ಡಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೆ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಕೆಲ ತಿಂಗಳುಗಳು ನಿಯಮ ಪಾಲಿಸಿದ ಐಆರ್ಬಿ ಕಂಪನಿಯವರು ಮತ್ತೆ ಹಳೆ ಚಾಳಿಯನ್ನೆ ಮುಂದುವರಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ಬಂಡೆಗಲ್ಲುಗಳನ್ನು ಸ್ಫೋಟಿಸಿದ ಕಾರಣ ಸಿಡಿದ ಕಲ್ಲುಗಳು, ಮನೆ, ಶಾಲೆಗಳ ಮೇಲೆ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರ ಮೈ ಮೇಲೆ ಕಲ್ಲು ಬೀಳುವುದು ಸ್ವಲ್ಪದರಲ್ಲಿಯೇ ತಪ್ಪಿದೆ.
ಆದರೆ ಈ ಬಗ್ಗೆ ಕಂಪನಿಯವರನ್ನು ಕೇಳಿದರೆ ಜಿಲ್ಲಾಡಳಿತ ಪರವಾನಗಿ ಪಡೆದಿರುವುದಾಗಿ ತಿಳಿಸುತ್ತಾರೆ. ಇನ್ನು ಕಲ್ಲುಗಳ ಸ್ಫೋಟದಿಂದ ಮತ್ತೆ ಗುಡ್ಡ ಬಿರುಕು ಬಿಡುತ್ತಿದ್ದು ಮಳೆಗಾಲದಲ್ಲಿ ಮತ್ತೆ ಗುಡ್ಡ ಗ್ರಾಮದ ಮನೆಗಳ ಮೇಲೆ ಕುಸಿದು ಬೀಳುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ. ಇದಲ್ಲದೇ ಸ್ಫೋಟದಿಂದ ಗ್ರಾಮದ ಮನೆಗಳಲ್ಲಿ ಸಹ ಬಿರುಕು ಕಂಡಿದ್ದು ಇದೇ ರೀತಿ ಸ್ಫೋಟ ಮುಂದುವರೆಸಿದರೆ ಮುಂದೆ ದೊಡ್ಡ ಅನಾಹುತ ಆಗುವುದರಲ್ಲಿ ಅನುಮಾನವಿಲ್ಲ ಎನ್ನುವುದು ಗ್ರಾಮಸ್ಥರ ಆತಂಕ