ಕಾರವಾರ: ಕೋವಿಡ್-19 ಸೋಂಕು ತಡೆಯಲು ಅಧಿಕೃತವಾಗಿ ಯಾವುದೇ ಔಷಧಿ ಕಂಡುಹಿಡಿದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಸೂಚಿಸಿದ ನಂತರವೇ ಯಾವುದೇ ಔಷಧಿಯಾಗಲಿ ಅದು ಅಧಿಕೃತವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19ಗೆ ಮದ್ದು ಎಂದು ಬಿಂಬಿಸುವ ವಿವಿಧ ಕಂಪನಿಗಳ ಮಾತ್ರೆಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗಾವಹಿಸುವಂತೆ ಸಕ್ಕರೆ ಮತ್ತು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ರೆವಿಂಟೊ ಲೈಫ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಯುರ್ವೇದಿಕ್ ಮಾತ್ರೆಯಾದ 'ರೆವಿರೊಲ್'ನ ನಿಯಮಿತ ಸೇವನೆಯಿಂದ ಆಯುರ್ವೇದಿಕ್ ವೈದ್ಯರೊಬ್ಬರು ಕೊರೊನಾ ನೆಗೆಟಿವ್ ಬಂದಿರುವುದಾಗಿ ಹೇಳಿದ್ದು, ಇದನ್ನು ಎಲ್ಲೆಡೆ ನೀಡಲು ಪ್ರಯತ್ನಿಸುವುದಾಗಿ ಮಾಜಿ ಶಾಸಕ ಸತೀಶ್ ಸೈಲ್ ಹೇಳಿಕೆಗೆ ಸಚಿವರು ವಿರೋಧ ವ್ಯಕ್ತಪಡಿಸಿದರು. ಬಳಿಕ ಈ ಬಗ್ಗೆ ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಐಸಿಎಂಆರ್ ಸಂಸ್ಥೆ ಸೂಚನೆಯಂತೆಯೇ ಔಷಧಿ ನೀಡಲಾಗುತ್ತಿದೆ. ಬೇರೆ ಯಾವುದೂ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಳಿಕ ಸಚಿವರು ಇಂತಹ ಮಾತ್ರೆಗಳ ಬಗ್ಗೆ ಆರೋಗ್ಯಾಧಿಕಾರಿಗಳು ನಿಗಾ ಇಡುವಂತೆ ಸೂಚಿಸಿದರು.
ಇನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಯಾವುದೇ ರೀತಿಯ ಕೊರತೆ ಅಥವಾ ಸಮಸ್ಯೆಯಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಹೊರಗೆ ಮತ್ತು ಒಳಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.