ಕಾರವಾರ: ಮತದಾನ ಪಟ್ಟಿಯಲ್ಲಿ ಮತದಾರರ ಹಾಗೂ ಅಭ್ಯರ್ಥಿಯ ಹೆಸರು ಇಲ್ಲದಿರುವುದಕ್ಕೆ ಗೊಂದಲ ಸೃಷ್ಟಿಯಾದ ಘಟನೆ ಕುಮಟಾ ತಾಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ದೇವಗಿರಿ ಗ್ರಾ.ಪಂ. ವ್ಯಾಪ್ತಿಯ ದೇವಗಿರಿ ಹಾಗೂ ಮಠ ವಾರ್ಡ್ನ ಮತದಾರರ ಹೆಸರನ್ನು ತಮ್ಮ ವಾರ್ಡ್ ಹೊರತುಪಡಿಸಿ, ಕಡೇಕೋಡಿ ವಾರ್ಡಿನ ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದಾಗಿ ತಾವು ನಿಂತ ವಾರ್ಡ್ಗೆ ಮತ ಹಾಕಲಾಗದೇ ಅಭ್ಯರ್ಥಿಗಳು ಹಾಗೂ ಮತದಾರರು ಪೇಚಿಗೆ ಸಿಲುಕಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರನ್ನು ಕಡೇಕೋಡಿ, ಹರನೀರ ವಾರ್ಡ್ಗೆ ಸೇರ್ಪಡೆ ಮಾಡಲಾಗಿತ್ತು. ಆದರೆ, ಈಗ 2015 ರಲ್ಲಿರುವ ಗ್ರಾ.ಪಂ ಪಟ್ಟಿಯಂತೆ ಕಡೇಕೋಡಿ ವಾರ್ಡ್ಗೆ ಪುನಃ ಸೇರಿಸಲಾಗಿದೆ. ಆದರೆ, ಚುನಾವಣೆ ಘೋಷಣೆ ಆಗಿದ್ದಾಗ ವಿಧಾನಸಭೆ ಚುನಾವಣೆಯಲ್ಲಿ ವಿಂಗಡನೆ ಮಾಡಿದ ವಾರ್ಡ್ನಂತೆ ವಿಂಗಡಿಸಲಾಗಿತ್ತು. ಆದರೆ, ಇದೀಗ ಬೇರೆ ವಾರ್ಡ್ ಮತದಾನ ಪಟ್ಟಿಯಲ್ಲಿ ಸೇರಿಸಿದ್ದರಿಂದ ಅಭ್ಯರ್ಥಿಗಳೇ ತಮ್ಮ ಕ್ಷೇತ್ರದಲ್ಲಿ ಮತ ಹಾಕದಂತಾಗಿದ್ದು, ಈ ಬಗ್ಗೆ ಅಭ್ಯರ್ಥಿಗಳು ಹಾಗೂ ಮತದಾರರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನು ಈ ಗೊಂದಲದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಇದನ್ನೂ ಓದಿ:ಅಜ್ಮೀರಾ ಕಂಪನಿಯಿಂದ ಬಹುಕೋಟಿ ವಂಚನೆ ಪ್ರಕರಣ: ಆಸ್ತಿ ಜಪ್ತಿ ಮಾಡಿದ ಇಡಿ